- ಹೇಮಂತ್ ಸಂಪಾಜೆ
ಸರಿ ಸುಮಾರು ೧೧ ವರ್ಷಗಳ ಹಿಂದಿನ ಕಥೆಯಿದು. ರಾಜ್ಯದ ನಂಬರ್ ವನ್ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಎಸ್.ಡಿ.ಎಂ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು)ನಲ್ಲಿ ಎಂಸಿಜೆ (ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ) ಸ್ನಾತಕೋತ್ತರ ಪದವಿ ಪಡೆಯುವ ಕನಸಿನೊಂದಿಗೆ ಆಗ ತಾನೆ ಕಾಲೇಜಿಗೆ ಕಾಲಿಟ್ಟಿದ್ದೆ.
ನನ್ನ ಕಾಲೇಜು ದಿನಗಳು, ಸುತ್ತಲಿನ ಸುಂದರ ಪರಿಸರ, ಉಪನ್ಯಾಸಕರು, ಮಿತ್ರರೊಂದಿಗಿನ ಆಟ-ಪಾಠ-ಚರ್ಚೆ ಎಲ್ಲವೂ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಆಗ ಪ್ರಾಂಶುಪಾಲರಾಗಿ ಇಡೀ ಕಾಲೇಜಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದವರು ಡಾ. ಬಿ. ಯಶೋವರ್ಮ. ನೋಡಲು ಸ್ವಲ್ಪ ಸಣ್ಣ ಜೀವ, ಆದರೆ ಜೀವಕ್ಕಿಂತ ಹೆಚ್ಚಿನ ಖಡಕ್ ವ್ಯಕ್ತಿತ್ವ. ಅವರು ಯಾವೊಬ್ಬ ವಿದ್ಯಾರ್ಥಿಗೂ ಏರು ಧ್ವನಿಯಲ್ಲಿ ಗದರಿಸಿದ್ದನ್ನು ನಾನೆಂದಿಗೂ ನೋಡಿಯೇ ಇಲ್ಲ. ಆದರೂ ಕಾಲೇಜಿನ ಯಾವುದೇ ಒಂದು ಕಾರ್ಯಕ್ರಮದಲ್ಲಿ ಯಶೋವರ್ಮ ಉಪಸ್ಥಿತಿ ಇದೆ ಎಂದಾದ ಮೇಲೆ ವಿದ್ಯಾರ್ಥಿಗಳಲ್ಲಿ ಅವರಿಗೇ ಅರಿಯದೇ ಒಂದು ಭಯ- ಭಕ್ತಿ ಬಂದು ಬಿಡುತ್ತಿತ್ತು. ಅದೊಂದು ಗೌರವ ಸೂಚಕ ಭಯ. ಶಿಸ್ತಿನ ವಿಚಾರದಲ್ಲಿ ಯಶೋವರ್ಮರು ಎಂದೂ ರಾಜಿ ಮಾಡಿಕೊಂಡಂತಿರಲಿಲ್ಲ. ತಮ್ಮ ಕಣ್ ನೋಟಗಳಿಂದಲೇ ಇಡೀ ಕಾಲೇಜನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾದ ವಿಶೇಷ ಶಕ್ತಿ ಒಲಿದಿತ್ತು.
ಬಿಳಿ ಬಣ್ಣದ ಗರಿಗರಿಯಾದ ಶರ್ಟ್, ಅದಕ್ಕೊಪ್ಪುವ ಟೈ, ಬ್ಲ್ಯಾಕ್ ಪ್ಯಾಂಟ್, ನೀಟ್ ಇನ್ ಶರ್ಟ್, ಬ್ಲ್ಯಾಕ್ ಶೂ ಹಾಕಿಕೊಂಡು ಬರುವ ಅವರದ್ದು ಆಕರ್ಷಕವಾದ ವ್ಯಕ್ತಿತ್ವ. ಇವರ ಬಿಳಿಯ ಬಣ್ಣದ ಐಷಾರಾಮಿ ಕಾರೊಂದು ಉಜಿರೆ ಕಡೆಯಿಂದ ಬಂದು ಎಸ್ ಡಿಎಂ ನ ಮುಖ್ಯ ದ್ವಾರದ ಬಳಿ ನಿಂತಿತೆಂದರೆ ಯಶೋವರ್ಮ ಅವರು ಬಂದರೆಂದೇ ಅರ್ಥ. ಅವಯಾ ಪ್ರಿನ್ಸಿ ಪಾಲ್ ಬತ್ತೆರು..(ನೋಡಿಯಲ್ಲಿ ಪ್ರಿನ್ಸಿ ಪಾಲ್ ಬಂದ್ರು) ಅಂತ ವಿದ್ಯಾರ್ಥಿಗಳು ದಡ್ಡಕ್ ಅಂತ ಕಾರಿಡಾರ್ ನಿಂದ ಎದ್ದು ಕ್ಲಾಸ್ ರೂಂ ಸೇರಿಕೊಳ್ಳುತ್ತಿದ್ದರು. ಅವರು ಎದುರಿಗೆ ಬರುವಾಗ ಯಾವೊಬ್ಬ ವಿದ್ಯಾರ್ಥಿಯೂ ಕಾರಿಡಾರ್ ನಲ್ಲಿ ಓಡಾಡುವ ದುಸ್ಸಾಹಸ ಮಾಡುತ್ತಿರಲಿಲ್ಲ. ಅಷ್ಟರ ಮಟ್ಟಿಗಿನ ಶಿಸ್ತನ್ನು ಇಡೀ ಕಾಲೇಜಿನಲ್ಲಿ ಯಶೋವರ್ಮ ಬಿತ್ತಿದ್ದರು.
ಕಾಲೇಜಿಗೆ ಸಂಬಂಧಪಟ್ಟ ಅದ್ಯಾವ ಕೆಲಸ ಇದ್ದರೂ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಸವಾಲು ಕಷ್ಟಗಳ ಸಮಯದಲ್ಲೂ ಕಾಲೇಜನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅದಕ್ಕೊಂದು ಪುಟ್ಟ ಉದಾಹರಣೆ ನೀಡುತ್ತಿದ್ದೇನೆ. ಅದೊಂದು ದಿನ ಮಧ್ಯಾಹ್ನ ಎಸ್ ಡಿ ಎಂ ಇಂಜಿನೀಯರಿಂಗ್ ಕಾಲೇಜಿನ ಬಳಿ (ನಮ್ಮ ಹಾಸ್ಟೇಲ್ ನಿಂದ ಅಣತಿ ದೂರದಲ್ಲಿ) ತೊಂದರೆ ಸಂಭವಿಸಿತು. ವಾರದೊಳಗೆ ಬೆನ್ನು ಬೆನ್ನಿಗೆ ಹಾಸ್ಟೇಲ್ ನಲ್ಲೂ ಸಮಸ್ಯೆ ಕಾಣಿಸಿಕೊಂಡಿತ್ತು. ಆಕಸ್ಮಿಕವಾಗಿ ಸಂಭವಿಸಿದ ಈ ಸರಣಿ ಸಮಸ್ಯೆಗಳ ಸರಮಾಲೆಯಿಂದಾಗಿ ೫೦೦ ಕ್ಕೂ ಅಧಿಕ ಇಂಜಿನೀಯರ್ ವಿದ್ಯಾರ್ಥಿಗಳಿದ್ದ ಹಾಸ್ಟೇಲ್ ಹುಡುಗರಿಗೆ ೧೦ ದಿನಗಳ ರಜೆ ಕೊಟ್ಟು ಮನೆಗೆ ಕಳಿಸಲಾಯಿತು. ಆದರೆ ಪತ್ರಿಕೋದ್ಯಮ ಅಧ್ಯಯನ ನಡೆಸುತ್ತಿದ್ದ ನಾನು, ನನ್ನ ಮಿತ್ರ ಮನೋಹರ್, ಸುದರ್ಶನ್, ಸೀಮಾ ಹಾಸ್ಟೇಲ್ ನಲ್ಲಿಯೇ ಉಳಿದುಕೊಳ್ಳಬೇಕಾಯಿತು. ಈ ಸಂದರ್ಭದಲ್ಲಿ ಸ್ನೇಹಿತೆ ಸೀಮಾಳನ್ನು ಮೈತ್ರೇಯಿ ಹಾಸ್ಟೇಲ್ ಗೆ ಶಿಫ್ಟ್ ಮಾಡಿಸಿ , ನಮ್ಮ ವಿಭಾಗದ ಮುಖ್ಯಸ್ಥರಾದ ಭಾಸ್ಕರ್ ಹೆಗ್ಡೆಯವರಿಗೆ ನಮಗೆ ಮರುದಿನ ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡುವಂತೆ ಯಶೋವರ್ಮ ಸೂಚಿಸಿದ್ದರು. ಅಲ್ಲದೆ ರಾತ್ರಿ ಹೊತ್ತು ಸ್ವಲ್ಪ ಎಚ್ಚರಿಕೆಯಿಂದ ಇರಿ, ಇಷ್ಟು ದೊಡ್ಡ ಹಾಸ್ಟೇಲ್ ನಲ್ಲಿ ನೀವು ಮೂವರೇ ಇರುವುದು, ಹಾಗಂತ ಹೆದರಿಕೊಳ್ಳಬೇಕಾದ ಅವಶ್ಯಕತೆ ಇಲ್ಲ, ಕಾಲೇಜಿನ ನಿರ್ವಹಣಾ ಸಿಬ್ಬಂದಿ ನಿಮ್ಮ ಜತೆ ಇದ್ದಾರೆ. ಏನೇ ಸಮಸ್ಯೆ ಆದರೂ ವೈಯಕ್ತಿಕವಾಗಿ ನನ್ನ ಗಮನಕ್ಕೆ ತನ್ನಿ ಎಂದು ಬೆನ್ನು ತಟ್ಟಿ ಧೈರ್ಯ ತುಂಬಿದ್ದರು. ಪಠ್ಯ ಚಟುವಟಿಕೆ ಇರಲಿ ಅಥವಾ ಪಠ್ಯೇತರ ಚಟುವಟಿಕೆ ಇರಲಿ ಯಶೋವರ್ಮ ಸಲಹೆ ಸೂಚನೆ ಸದಾ ಇರುತ್ತಿತ್ತು. ನಿವೃತ್ತಿಯ ನಂತರವೂ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅಂತಹ ಯಶೋವರ್ಮ ಅವರು ಇಂದು ನಮ್ಮೊಂದಿಗಿಲ್ಲ ಅನ್ನುವುದೇ ಶಾಕಿಂಗ್ ಸುದ್ದಿ. ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಬಾವನವರಾಗಿರುವ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆಯವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.