ಸುಳ್ಯ: ಇಲ್ಲಿನ ಗಾಂಧಿನಗರದಲ್ಲಿ ಲಾರಿಯಡಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಇಂದು ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮಂಜುನಾಥ್ ಎಂಬ ಯುವಕ ಕೆಲವು ಸಮಯದಿಂದ ಸುಳ್ಯದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ತೀವ್ರವಾಗಿ ಮಾನಸಿಕವಾಗಿ ಬಳಲಿದಂತೆ ಕಂಡು ಬರುತ್ತಿದ್ದ. ನಿನ್ನೆ (ಬುಧವಾರ) ಮಧ್ಯಾಹ್ನ ಗಾಂಧಿನಗರದ ಮುಖ್ಯ ರಸ್ತೆಯಲ್ಲಿ ತೆಂಗಿನ ಕಾಯಿ ಲೋಡ್ ತೆಗೆದುಕೊಂಡು ಬರುತ್ತಿದ್ದ ಲಾರಿಯ ಹಿಂಬದಿಯ ಚಕ್ರದಡಿಗೆ ಬಿದ್ದು ಆತ್ಮಹತ್ಯೆಗೆ ಯತ್ನ ನಡೆಸಿದ್ದ. ಈ ಘಟನೆಯ ಸಿಸಿಟಿವಿ ದೃಶ್ಯ ವೈರಲ್ ಆಗಿತ್ತು. ಗಾಯಗೊಂಡ ಆತನನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿತ್ತು. ಆದರೆ ಇಂದು ಬೆಳಗ್ಗೆ 6.30 ರ ಸುಮಾರಿಗೆ ಆತ ಕೊನೆಯುಸಿರೆಳೆ ದಿದ್ದಾನೆ ಎಂದು ತಿಳಿದು ಬಂದಿದೆ. ಮಂಜುನಾಥ್ ಕುಟುಂಬ ಸಮೇತ ಸುಳ್ಯದಲ್ಲಿ ನೆಲೆಸಿದ್ದ. ಇತ್ತೀಚೆಗೆ ಆತ ಪತ್ನಿ ಮತ್ತು ಮಗುವನ್ನು ಊರಿಗೆ ಕಳಿಸಿ ಒಬ್ಬಂಟಿಯಾಗಿದ್ದ.