ಬೆಳಗಾವಿ/ವಿಜಯನಗರ: ಮುಸ್ಲಿಂ ವರ್ತಕರು ವ್ಯಾಪಾರ ಮಾಡುವುದಕ್ಕೆ ನಿರ್ಬಂಧ ವಿಧಿಸುವ ಹಿಂದೂ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಎಚ್ಚರಿಸಿದ್ದಾರೆ.
ಧಾರವಾಡದಲ್ಲಿ ಮುಸ್ಲಿಮರ ಅಂಗಡಿ ಧ್ವಂಸಗೊಳಿಸಿದ ಘಟನೆ ಬಗ್ಗೆ ಪ್ರಕ್ರಿಯಿಸಿದ ಅವರು, ‘ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸುವವರು ಅಥವಾ ಗಲಾಟೆ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸುತ್ತೇವೆ. ದೇಶದಲ್ಲಿ ವ್ಯಾಪಾರ ಮಾಡಲು ಸಂವಿಧಾನಾತ್ಮಕವಾಗಿ ಎಲ್ಲರಿಗೂ ಹಕ್ಕಿದೆ. ಕಾನೂನು ಉಲ್ಲಂಘಿಸುವವರನ್ನು ಪ್ರೋತ್ಸಾಹಿಸುವುದಿಲ್ಲ’ ಎಂದರು.
‘ಮುಸ್ಲಿಂ ವರ್ತಕರಿಗೆ ನಿರ್ಬಂಧಿಸುವುದಕ್ಕೆ ಸರ್ಕಾರದ ಬೆಂಬಲವಿಲ್ಲ. ಹಿಂದೂಪರ ಸಂಘಟನೆಗಳವರು ಏಕೆ ಮಾಡುತ್ತಿದ್ದಾರೆ? ಮಿತಿ ಮೀರಿದರೆ, ಕಾನೂನು ಕೈಗೆತ್ತಿಕೊಂಡರೆ, ಸರ್ಕಾರ ಕ್ರಮ ವಹಿಸಿಯೇ ತೀರುತ್ತದೆ. ಇದರಲ್ಲಿ ಎರಡು ಮಾತಿಲ್ಲ’ ಎಂದು ಅವರು ಎಚ್ಚರಿಕೆ ನೀಡಿದರು.