ಹೈದರಾಬಾದ್: ಹಲವು ಬೀದಿ ನಾಯಿಗಳ ದಾಳಿಗೆ ಮಗುವೊಂದು ಮೃತಪಟ್ಟಿರುವ ಆಘಾತಕಾರಿ ಘಟನೆ ಹೈದರಾಬಾದ್ ನ ಗೊಲ್ಕೊಂಡಾದ ಬಾದಾ ಬಜಾರ್ ಪ್ರದೇಶದಲ್ಲಿ ನಡೆದಿದೆ.
ಎರಡೂವರೆ ವರ್ಷದ ಅನಸ್ ಅಹ್ಮದ್, ಮನೆಯ ಸಮೀಪದಲ್ಲಿ ಆಟವಾಡುತ್ತಿದ್ದಾಗ ಬೀದಿ ನಾಯಿಗಳು ಮಗು ಮೇಲೆ ದಾಳಿ ನಡೆಸಿವೆ. ಅವುಗಳು ಮಗುವನ್ನು ಪಕ್ಕದ ಸೇನಾ ಪ್ರದೇಶಕ್ಕೆ ಎಳೆದೊಯ್ದಿವೆ. ಮಗುವಿನ ಚೀರಾಟ ಕೇಳಿದ ಪೋಷಕರು ಮತ್ತು ನೆರೆಹೊರೆಯವರು ಸ್ಥಳಕ್ಕೆ ತೆರಳಿ ಮಗುವನ್ನು ರಕ್ಷಿಸಿದ್ದಾರೆ ಮತ್ತು ನಾಯಿಗಳನ್ನು ಓಡಿಸಿದ್ದಾರೆ. ಮಗುವಿನ ಮುಖ, ಗಂಟಲು ಮತ್ತು ದೇಹದ ಇತರ ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆ ವೇಳೆಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮಗುವಿನ ಮೇಲೆ ದಾಳಿ ಮಾಡಿರುವ ಮತ್ತು ಎಳೆದೊಯ್ದಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.