ಸುಳ್ಯ: ಆರು ವರ್ಷಗಳ ಹಿಂದೆ ಡಿಕೆ ಶಿವ ಕುಮಾರ್ ಇಂಧನ ಸಚಿವರಾಗಿದ್ದ ಸಂದರ್ಭದಲ್ಲಿ ಸಚಿವರಿಗೆ ಫೋನ್ ಮಾಡಿ ಹಿಗ್ಗಾಮುಗ್ಗಾ ಬೈದಿದ್ದ ಸುಳ್ಯದ ವ್ಯಕ್ತಿಯೊಬ್ಬರಿಗೆ ಜೈಲು ಶಿಕ್ಷೆ ವಿಧಿಸಿ ಸುಳ್ಯ ನ್ಯಾಯಾಲಯ ತೀರ್ಪು ನೀಡಿದೆ.
ಬೆಳ್ಳಾರೆಯ ಸಾಯಿ ಗಿರಿಧರ್ ರೈಯವರ ವಿರುದ್ಧ ಡಿಕೆ ಶಿವ ಕುಮಾರ್ ಪರವಾಗಿ ಮೆಸ್ಕಂ ಹಿರಿಯ ಅಧಿಕಾರಿಗಳು ದೂರು ದಾಖಲಿಸಿದ್ದರು. ಅವಾಚ್ಯ ಶಬ್ಧಗಳಿಂದ ಡಿಕೆಶಿಯವರಿಗೆ ಬೈದ ಆರೋಪಕ್ಕೆ ಗುರಿಯಾಗಿದ್ದ ಸಾಯಿ ಗಿರಿಧರ್ ರೈ ವಿರುದ್ಧ ಇಷ್ಟು ವರ್ಷಗಳಿಂದ ಕೋರ್ಟ್ ಕೇಸು ನಡೆಯುತ್ತಿತ್ತು. ಇದೀಗ ವಿಚಾರಣೆ ಪೂರ್ತಿಗೊಂಡು ನ್ಯಾಯಾಲಯ ಸಾಯಿ ಗಿರಿಧರ್ ಗೆ ಶಿಕ್ಷೆ ಪ್ರಕಟಿಸಿದೆ. 2 ವರ್ಷ ಜೈಲು ಶಿಕ್ಷೆ ಮತ್ತು ಒಂದು ಪ್ರಕರಣದಲ್ಲಿ 5 ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ. 4 ಅಪರಾಧಗಳ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗೆ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ.
2016 ಫೆಬ್ರವರಿ 28 ರಂದು ಆಗಿನ ವಿದ್ಯುತ್ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಫೋನಾಯಿಸಿ ತರಾಟೆಗೆತ್ತಿಕೊಂಡಿದ್ದರು. ಈ ಸಂದರ್ಭ ಅವರು ಸುಳ್ಯದ ವಿದ್ಯುತ್ ಸಮಸ್ಯೆ ಬಗ್ಗೆ ಹೇಳುವುದರ ಜತೆಗೆ ಸಚಿವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆಂದು ಡಿಕೆಶಿ ಪರವಾಗಿ ಮೆಸ್ಕಾಂ ಹಿರಿಯ ಅಧಿಕಾರಿಗಳು ಗಿರಿಧರ ರೈಯವರ ಮೇಲೆ ದೂರು ನೀಡಿದ್ದರು. ಕೇಸು ದಾಖಲಿಸಿಕೊಂಡ ಪೊಲೀಸರು ರಾತ್ರೋ ರಾತ್ರಿ ಗಿರಿಧರ್ ರೈಯವರ ಮನೆಗೆ ತೆರಳಿದ್ದರು. ಮನೆ ಬಾಗಿಲು ತೆರೆಯದಿದ್ದಾಗ ಹಂಚು ಸರಿಸಿ ಒಳ ಪ್ರವೇಶಿಸಿ ಗಿರಿಧರ್ ರೈಯವರನ್ನು ಬಂಧಿಸಲಾಗಿತ್ತು. ಈ ಪ್ರಕರಣ ರಾಜ್ಯಾದಾದ್ಯಂತ ಕುತೂಹಲ ಕೆರಳಿಸಿತ್ತು. ಸುಳ್ಯ ಪೊಲೀಸ್ ಠಾಣೆಯ ಆಗಿನ ಎಸ್.ಐ. ಚಂದ್ರಶೇಖರ್ ಹೆಚ್.ವಿ. ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನೂ ಸಾಕ್ಷಿಯನ್ನಾಗಿಸಲಾಗಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ವಾರೆಂಟ್ ಹೊರಡಿಸಲಾಗಿತ್ತು. ಕಳೆದ ವರ್ಷ ಅಕ್ಟೋಬರ್ 5ರಂದು ಈಗ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ ಕೆ ಶಿವಕುಮಾರ್ ಸುಳ್ಯಕ್ಕೆ ಬಂದು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ಹೇಳಿದ್ದರು.