ಮಡಿಕೇರಿ: ಗಂಡ-ಹೆಂಡತಿ ಜಗಳವು ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದಕ್ಷಿಣ ಕೊಡಗಿನ ಕಾಕೋಟುಪರಂಬು ನಾಲ್ಕೇರಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಜೇನು ಕುರುಬರ ಸುಮಿತ್ರ (25) ಪತಿ ಚೋಮಚ್ಚೀರ ಲವನಿಂದಲೇ ಕೊಲೆಯಾದ ದುರ್ದೈವಿಯಾಗಿದ್ದಾರೆ. ಮಧ್ಯ ರಾತ್ರಿ ಕಬ್ಬಿಣದ ಸಲಾಕೆಯಿಂದ ಪತ್ನಿ ಮೇಲೆ ಹಲ್ಲೆಮಾಡಿದ್ದಾನೆ ಎಂದು ತಿಳಿದು ಬಂದಿದೆ.
ರಾತ್ರಿ ದಂಪತಿಗಳ ನಡುವೆ ಮಾತಿಗೆ ಮಾತು ಬೆಳೆದಿದೆ. ಸಿಟ್ಟಿಗೆದ್ದ ಲವ ಪತ್ನಿಯನ್ನು ಸಲಾಕೆಯಿಂದ ಹೊಡೆದಿದ್ದಾನೆ. ನಂತರ ಆತ ಪಕ್ಕದ ಕೋಣೆಯಲ್ಲಿ ಹೋಗಿ ಮಲಗಿದ್ದಾನೆ. ಬೆಳಗ್ಗೆ ತೋಟದ ಮಾಲೀಕರು ಲೈನ್ ಮನೆಯಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಇತರ ಕಾರ್ಮಿಕರ ಮೂಲಕ ಪರಿಶೀಲಿಸಿದಾಗ ಸುಮಿತ್ರ ಮೃತಪಟ್ಟಿರುವುದು ಕಂಡು ಬಂದಿದೆ. ಪಕ್ಕದ ಕೋಣೆಯಲ್ಲಿದ್ದ ಲವ ತಪ್ಪೊಪ್ಪಿಕೊಂಡಿದ್ದಾನೆ. ಲವನನ್ನು ಪೊಲೀಸರು ಬಂಧಿಸಿದ್ದು, ಎರಡೂವರೆ ವರ್ಷದ ಪುತ್ರ ಹಾಗೂ 6 ತಿಂಗಳ ಪುತ್ರಿ ಅನಾಥರಾಗಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ವಿರಾಜಪೇಟೆ ಡಿವೈಎಸ್ಪಿ ಗಜೇಂದ್ರ ಪ್ರಸಾದ್, ವೃ ತ್ತನೀರಿಕ್ಷಕ ಶಿವ ರುದ್ರಪ್ಪ ಗ್ರಾಮಾಂತರ ಠಾಣೆಯ ಪಿ.ಎಸ್.ಐ. ಸಿದ್ದಲಿಂಗ ಭಿ ಬಾಣಸೆ, ಅಪರಾಧ ವಿಭಾಗದ ಪಿ.ಎಸ್.ಐ. ಸಿ.ಬಿ.ಶ್ರೀಧರ್ ಭೇಟಿ ನೀಡಿ ಪರಿಶೀಲಿಸಿದರು.