ಕಲ್ಲುಗುಂಡಿ: ಪಶ್ಚಿಮ ಘಟ್ಟಗಳ ಸುಂದರ ಪರಿಸರ ಆಕರ್ಷಣಿಯ ಕೇಂದ್ರವಾಗಿದೆ.. ಪಶ್ಚಿಮ ಘಟ್ಟಗಳ+ವೈವಿಧ್ಯತೆಯನ್ನು ರಕ್ಷಣೆ ಮಾಡಿ ನಮ್ಮ ಮುಂದಿನ ಪೀಳಿಗೆಗೆ ನೀಡುವ ಅಗತ್ಯ ಇದೆ. ಪಶ್ಚಿಮ ಘಟ್ಟದ ಪರಿಸರ ಮತ್ತು ಪ್ರಕೃತಿ ಸಂರಕ್ಷಣೆ ಅತೀ ಅಗತ್ಯ ಎಂದು ಮೈಸೂರು ರಾಜ ಸಂಸ್ಥಾನದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಅವರು ಸಂಪಾಜೆ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ಶನಿವಾರ ಸಂಪಾಜೆಯಲ್ಲಿ ನಡೆದ ಸಂಪಾಜೆ ಯಕ್ಷೋತ್ಸವ- 2022 ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ನಮ್ಮ ಸಂಸ್ಕೃತಿಯ ಉಳಿವಿಗೆ ಯಕ್ಷಗಾನ ಕೊಡುಗೆ ನೀಡಿದೆ. ಅಂತಹ ಯಕ್ಷಗಾನದ ಉಳಿವಿಗೆ ಡಾ. ಕೀಲಾರು ಗೋಪಾಲಕೃಷ್ಣ ಪ್ರತಿಷ್ಠಾನದ ವತಿಯಿಂದ ಪ್ರಮಾಣಿಕ ಪ್ರಯತ್ನ ಮಾಡಿದೆ ಎಂದು ಹೇಳಿದರು.
ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಮಾತನಾಡಿದರು ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಂ. ಎಲ್. ಸಾಮಗ ಗುರುವಂದನೆ ಸಲ್ಲಿಸಿ ಕೇಶವಾನಂದ ಭಾರತೀ ಸ್ವಾಮೀಜಿಗಳ ಸ್ಮರಣೆ ಮಾಡಿದರು. ಸಾಹಿತಿ, ನ್ಯಾಯವಾದಿ ಕೆ. ಪಿ. ಬಾಲಸುಬ್ರಹ್ಮಣ್ಯ ಹಾಗೂ ಹಿರಣ್ಯ ವೆಂಕಟೇಶ್ ಭಟ್ ಅಭಿನಂದನಾ ಭಾಷಣ ಮಾಡಿದರು.
ಸಮಾರಂಭದ ಬಳಿಕ ರಾತ್ರಿಯಿಂದ ಮುಂಜಾನೆವರೆಗೆ ಯಕ್ಷಲೋಕದ ಪ್ರಸಿದ್ಧ ಕಲಾವಿದರ ನಾಲ್ಕು ತಂಡಗಳಿಂದ ಚಂದ್ರಾವಳಿ ವಿಲಾಸ, ಮಾಯಾ ಮಾರುತೇಯ, ಸಹಸ್ರ ಕವಚ, ಮಕರಾಕ್ಷ ಕಾಳಗ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.
ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಕೆ. ಎನ್. ಭಟ್ ಇವರಿಗೆ ಶ್ರೀ ಕೇಶವಾನಂದ ಭಾರತೀ ರಾಷ್ಟ್ರೀಯ ನ್ಯಾಯ ಪ್ರಶಸ್ತಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್ ರವರಿಗೆ ಕೇಶವಾನಂದ ಬಾರತೀ ಶೈಕ್ಷಣಿಕ ಪ್ರಶಸ್ತಿ, ಶರವು ದೇವಸ್ಥಾನದ ಅನುವಂಶಿಕ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಯವರಿಗೆ ಯಕ್ಷೋತ್ಸವ ವೈದಿಕ ಪ್ರಶಸ್ತಿ, ಅಂತಾರಾಷ್ಟ್ರೀಯ ಕಲಾವಿದರಾದ ತ್ರಿಚೂರ್ ಬ್ರದರ್ಸ್ ಇವರಿಗೆ ಕೇಶವಾನಂದ ಭಾರತಿ ಸಂಗೀತ ಪ್ರಶಸ್ತಿ, ಯಕ್ಷಮೇಳಗಳ ಸಂಚಾಲಕ ಕಾರ್ಕಳದ ಪಿ. ಕಿಶನ್ ಹೆಗ್ಡೆ ಇವರಿಗೆ ಕೇಶವಾನಂದ ಭಾರತಿ ಯಕ್ಷಗಾನಾಧ್ವರ್ಯು ಪ್ರಶಸ್ತಿ ನೀಡಿ ಗೌರವಿಸಲಾಯಿತು.