ಕೀವ್: ರಷ್ಯಾ ಸೇನೆಯ ವಿರುದ್ಧ ಅಜ್ಜಿಯೊಬ್ಬಳು ವಿಷಯುದ್ಧ ಮಾಡಿ ಭಾರಿ ಸುದ್ದಿಯಾಗಿದ್ದಾಳೆ. ಆಕೆ ಮಾಡಿದ ಯುದ್ಧಕ್ಕೆ ಒಂದು ಕಡೆಯಿಂದ ಮೆಚ್ಚುಗೆ ಮತ್ತೊಂದು ಕಡೆಯಿಂದ ಭಾರಿ ವಿರೋಧವು ವ್ಯಕ್ತವಾಗಿದೆ. ಸ್ವತಃ ಇದನ್ನು ಉಕ್ರೇನಿನ ಭ್ರಷ್ಟಾಚಾರ ವಿರೋಧಿ ಕ್ರಿಯಾ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕಿ ದರಿಯಾ ಕಲೆನ್ಯೂಕ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
ಉಕ್ರೇನ್ನಲ್ಲಿ ರಷ್ಯಾ ಪಡೆಗಳಿಗೆ ಈಗಾಗಲೇ ಇಂಧನ ಮತ್ತು ಆಹಾರದ ಕೊರತೆ ಎದುರಾಗಿದೆ. ಯೋಧರು ಉಕ್ರೇನ್ ನೆಲದಲ್ಲಿ ಹನಿ ನೀರು ಮತ್ತು ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಜತೆಗೆ ಉಕ್ರೇನ್ ಸೈನಿಕರ ತೀವ್ರ ಪ್ರತಿರೋಧ, ಗೆರಿಲ್ಲಾ ಮಾದರಿ ದಾಳಿ ನಡೆಸಿ ರಷ್ಯಾ ಸೈನಿಕರಿಗೆ ಶಾಕ್ ನೀಡುತ್ತಿದ್ದಾರೆ. ಹೀಗೆ ಅನ್ನ ನೀರಿಲ್ಲದೆ ಸುಸ್ತಾದ ರಷ್ಯಾ ಸೈನಿಕರು ಉಕ್ರೇನಿನ ಅಜ್ಜಿಯೊಬ್ಬರ ಮನೆಗೆ ಹೋಗಿದ್ದಾರೆ. ಏನಾದರೂ ತಿನ್ನಲು ನೀಡುವಂತೆ ಅಜ್ಜಿಯ ಬಳಿ ಕೇಳಿದ್ದಾರೆ. ಮನೆಯಲ್ಲಿ ತಯಾರಿಸಿದ ಕೇಕ್ ನೀಡಿ ಅಜ್ಜಿ ರಷ್ಯಾದ ಆಕ್ರಮಣಕಾರರನ್ನು ಸ್ವಾಗತಿಸಿದ್ದಾರೆ. ಅದು ವಿಷ ಮಿಶ್ರಿತ ಕೇಕ್. ತೀವ್ರ ಹಸಿವಿನಿಂದ ಕೇಕ್ ತಿಂದ ಆಕ್ರಮಣಕಾರರಲ್ಲಿ 8 ಮಂದಿ ಜೀವ ಬಿಟ್ಟಿದ್ದಾರೆ ಎಂದು ದರಿಯಾ ಕಲೆನ್ಯೂಕ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು ಸುಮಾರು 5 ಸಾವಿರ ಮಂದಿ ರಿಟ್ವೀಟ್ ಮಾಡಿದ್ದರೆ, ಸುಮಾರು 25 ಸಾವಿರ ಜನರು ಲೈಕ್ ಮಾಡಿದ್ದಾರೆ.