ಸುಳ್ಯ: ವಿವಿಧ ಬೇಡಿಕೆಗಳನ್ನು ಮುಂದಿರಿಸಿ, ಕೇಂದ್ರ ಸರಕಾರದ ಕಾರ್ಮಿಕ–ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಒಕ್ಕೂಟ ನಡೆಸುತ್ತಿರುವ ಎರಡು ದಿನಗಳ ದೇಶವ್ಯಾಪಿ ಮುಷ್ಕರಕ್ಕೆ ಬೆಂಬಲ ಸೂಚಿಸಿ ಸುಳ್ಯದಲ್ಲಿ ಪ್ರತಿಭಟನೆ ನಡೆಯಿತು.
ಸಿಐಟಿಯು ಸುಳ್ಯ ತಾಲೂಕು ಸಮಿತಿ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಿಪಿಐಎಂ ಜಿಲ್ಲಾ ಮುಖಂಡ ಮುನೀರ್ ಕಾಟಿಪಳ್ಳ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಕಾರ್ಮಿಕರ ಹಕ್ಕನ್ನು, ಬೇಡಿಕೆಯನ್ನು ಮತ್ತು ಕಾರ್ಮಿಕರ ಚಳುವಳಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಯುತಿದೆ. ಕಾರ್ಮಿಕರ ಒಗ್ಗೂಡುವ ಶಕ್ತಿಯನ್ನು ಒಡೆಯುವ ಪ್ರಯತ್ನ ಎಲ್ಲೆಡೆ ನಡೆಯುತಿದೆ ಎಂದು ಹೇಳಿದರು. ಕೇಂದ್ರ, ರಾಜ್ಯ ಸರಕಾರಗಳು ನಿರಂತರ ಕಾರ್ಮಿಕ, ರೈತ ವಿರೋಧಿ ನೀತಿಯನ್ನು ಜಾರಿ ಮಾಡುತಿದೆ. ಇಂತಹಾ ಸ್ಥಿತಿಯಲ್ಲಿ ಮುಷ್ಕರ, ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.
ಸಿಐಟಿಯು ಸುಳ್ಯ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಪಿ.ರಾಬರ್ಟ್ ಡಿಸೋಜ ಮಾತನಾಡಿ ಕೇಂದ್ರ ಹಾಗು ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಯಿಂದ ದುಡಿಯುವ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕೇಂದ್ರ ಸರಕಾರದ ಕ್ರಮದಿಂದ ನಿರುದ್ಯೋಗ, ಬಡತನ, ಹಸಿವಿನ ಪ್ರಮಾಣ ಹೆಚ್ಚುತಿದೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತಿದೆ ಎಂದರು. ಆದುದರಿಂದ ಕೇಂದ್ರ ಸರಕಾರ ಕಾರ್ಮಿಕ, ರೈತ ವಿರೋಧಿ ನೀತಿಗಳನ್ನು ಹಿಂಪಡೆದು ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ನಾಗರಾಜ ಕಲ್ಲುಮುಟ್ಲು, ಶಿವರಾಮ ಗೌಡ, ಬಿಜು ಅಗಸ್ಟಿನ್, ಸುಂದರ ಜಯನಗರ, ಸುಂದರ ಆಚಾರಿ, ಹೆಚ್.ಕೆ.ನಾಗರಾಜ್, ವಿಶ್ವನಾಥ್ ನೆಲ್ಲಿಬಂಗಾರಡ್ಕ, ವಿಜಯಲಕ್ಷ್ಮಿ ಐವರ್ನಾಡು, ಲೀಲಾವತಿ ಅಲೆಕ್ಕಾಡಿ, ಲೀಲಾವತಿ ಸೂರ್ತಿಲ ಮತ್ತಿತರರು ಉಪಸ್ಥಿತರಿದ್ದರು.