ಸಂಪಾಜೆ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳಲ್ಲಿ ಇತ್ತೀಚೆಗೆ ಕಲ್ಲುಗುಂಡಿಯ ಚಟ್ಟೆಕಲ್ಲಿನ ಅಂಬಾಶ್ರಮದಲ್ಲಿ ನಡೆದ ಪ್ರಕರಣವೂ ಒಂದು. ಎಳನೀರು ಕೊಚ್ಚುವ ಮಚ್ಚು ಹಿಡಿದು ಬಂದಿದ್ದ ಹಂತಕರು ಏಕಾಏಕಿ ಮನೆಗೆ ನುಗ್ಗಿದ್ದರು. ಮಹಿಳೆಯರು, ವೃದ್ಧರ ಕತ್ತಿಗೆ ಮಚ್ಚು ಹಿಡಿದು ಹೆದರಿಸಿ ಬೆದರಿಸಿ ನಗ-ನಾಣ್ಯ ದೋಚಿದ್ದರು. ಈ ಪ್ರಕರಣ ನಡೆದು ವಾರಗಳು ಕಳೆದಿದ್ದರೂ ದಿನವೊಂದಕ್ಕೆ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಹೌದು, ಮನೆಗೆ ನುಗ್ಗಿದ ದರೋಡೆಕೋರರು ಮೊದಲು ಅಂಬರೀಶ್ ಭಟ್ ಅವರ ಹಿರಿಯ ಪುತ್ರ ಶ್ರೀವತ್ಸ ಅವರ ಪತ್ನಿ ಆಶಾ ಅವರ ಮಾಂಗಲ್ಯ ಸರ ಕಿತ್ತುಕೊಂಡಿದ್ದರು. ಅಲ್ಲದೆ ‘ಉತ್ತರ ಪ್ರದೇಶ ಚುನಾವಣೆಗೆ ಫಂಡ್ ನೀಡುವುದಕ್ಕೆ ನಿಮ್ಮಲ್ಲಿಗೆ ರು. 500 ಕೋಟಿ ಹಣ ಬಂದಿದೆ. ಆ ಹಣ ಎಲ್ಲಿದೆ ತಿಳಿಸಿ’ ಎಂದು ಡಕಾಯಿತರು ಆಶಾ ಅವರ ಕತ್ತಿಗೆ ಮಚ್ಚು ಹಿಡಿದು ಬೆದರಿಸಿದ್ದರು. ಹಣಕ್ಕಾಗಿ ಮನೆಯ ಟಾರಿಸ್ ಭಾಗದಲ್ಲೆಲ್ಲ ಹುಡುಕಾಟ ನಡೆಸಿದ್ದರು. ಕೊನೆಗೆ ಅವರ ಲೆಕ್ಕಾಚಾರ ತಪ್ಪಾಗಿ ಮನೆಯಲ್ಲಿ ಸಿಕ್ಕಿದ 100 ಗ್ರಾಂ ಚಿನ್ನಾಭರಣ ಹಾಗೂ 1,50 ಲಕ್ಷ ರೂ.ವಿಗೂ ಅಧಿಕ ಮೊತ್ತವನ್ನು ಎಗರಿಸಿ ಕಳ್ಳರು ಪರಾರಿಯಾಗಿದ್ದರು. ಇಷ್ಟೆಲ್ಲ ಮಾಡುವುದಕ್ಕೆ ಅವರು ಕೇವಲ ಹದಿನೈದು ನಿಮಿಷ ತೆಗೆದುಕೊಂಡಿದ್ದರು. ಈ ಬಗ್ಗೆ ಈಗಾಗಲೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಡಕಾಯಿತರ ಹೆಡೆಮುರಿ ಕಟ್ಟುವ ಪ್ರಯತ್ನದಲ್ಲಿದ್ದಾರೆ.