ಸುಳ್ಯ: ಸಂಪಾಜೆಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ ತನಿಖೆ ಮಾಡಲಾಗುತ್ತಿದೆ. ಊರಿನಲ್ಲಿ ಹಾಗೂ ಪರವೂರಿನಲ್ಲಿ ಕಳ್ಳರ ಜಾಡು ಹಿಡಿದು ಪೊಲೀಸರು ತನಿಖೆ ನಡೆಸುತ್ತಿದ್ದು ಶೀಘ್ರದಲ್ಲೇ ಕಳ್ಳರ ತಂಡವನ್ನು ಬಂಧಿಸುತ್ತೇವೆ ಎಂದು ನ್ಯೂಸ್ ನಾಟೌಟ್ ಗೆ ತನಿಖೆ ನೇತೃತ್ವ ವಹಿಸಿರುವ ಸುಳ್ಯದ ವೃತ್ತ ನಿರೀಕ್ಷಕ ನವೀನ್ ಚಂದ್ರಜೋಗಿ ತಿಳಿಸಿದ್ದಾರೆ.
ಈ ಬಗ್ಗೆ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದ ಅವರು, ತನಿಖೆ ಪ್ರಗತಿಯಲ್ಲಿದೆ. ನಾವು ಪ್ರತ್ಯೇಕ ಎರಡು ತಂಡಗಳನ್ನು ರಚಿಸಿದ್ದೇವೆ. ದರೋಡೆಕೋರರು ತಪ್ಪಿಸಿಕೊಳ್ಳಬಾರದು ಎನ್ನುವ ಕಾರಣಕ್ಕೆ ತನಿಖೆಯಲ್ಲಿ ಒಂದಷ್ಟು ಗೌಪ್ಯತೆ ಕಾಪಾಡಿಸಿಕೊಂಡಿದ್ದೇವೆ, ಪ್ರಕರಣದಲ್ಲಿ ಸ್ಥಳೀಯರ ಕೈವಾಡ ಇರುವುದರ ಬಗ್ಗೆ ಸದ್ಯಕ್ಕೆ ಯಾವ ಮಾಹಿತಿಯೂ ಇಲ್ಲ. ಎಲ್ಲ ಆಯಾಮದಿಂದಲೂ ತನಿಖೆ ಸಾಗುತ್ತಿದೆ. ಅಪರಾಧಿಗಳನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ಜೋಗಿ ತಿಳಿಸಿದರು.
ದರೋಡೆ ನಡೆದು ವಾರಗಳಾದರೂ ದರೋಡೆಕೋರರ ತಂಡವನ್ನು ಪೊಲೀಸರಿಗೆ ಇದುವರೆಗೆ ಬಂಧಿಸಲು ಸಾಧ್ಯವಾಗಿಲ್ಲ. ಈ ಕುರಿತಂತೆ ಜನರಲ್ಲಿ ಆತಂಕ ಮನೆ ಮಾಡಿದ್ದು ಕಳ್ಳರನ್ನು ಕೂಡಲೇ ಬಂಧಿಸಬೇಕು ಎನ್ನುವಂತಹ ಒತ್ತಾಯ ಕೇಳಿ ಬಂದಿದೆ. ಮಾ.೨೦ರಂದು ರಾತ್ರಿ ೮.೩೦ಕ್ಕೆ ಸಂಪಾಜೆ ಗ್ರಾಮದ ಕಲ್ಲುಗುಂಡಿ ಸಮೀಪದ ಚಟ್ಟೆಕಲ್ಲು ಎಂಬಲ್ಲಿ ಅಂಬರೀಶ್ ಭಟ್ ಅವರ ಮನೆಗೆ ಮಾರಕಾಸ್ತ್ರದೊಂದಿಗೆ ದಾಳಿ ಮಾಡಿದ್ದ ಕಳ್ಳರ ತಂಡ ಮನೆಯಲ್ಲಿದ್ದ ಮಹಿಳೆಯರನ್ನು ಹೆದರಿಸಿ -ಬೆದರಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿತ್ತು.