ಸಂಪಾಜೆ: ಮುಂದಿನ ಚಕ್ರ ಸ್ಫೋಟಗೊಂಡು ಸಂಪಾಜೆಯ ಗಡಿಕಲ್ಲು ಎಂಬಲ್ಲಿ ಹೊಳೆಗೆ ಉರುಳಿ ಬಿದ್ದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸುಬ್ರಹ್ಮಣ್ಯದಿಂದ ಹೊರಟ ಗುಂಡ್ಲುಪೇಟೆ ಬಸ್ ನ ಎಡಬದಿಯ ಮುಂದಿನ ಚಕ್ರ ಸ್ಫೋಟಗೊಂಡಿತ್ತು. ಸ್ಫೋಟದ ರಭಸಕ್ಕೆ ನಿಯಂತ್ರಣ ತಪ್ಪಿದ ಬಸ್ ಪಕ್ಕದಲ್ಲಿದ್ದ ಹೊಳೆಗೆ ಉರುಳಿಬಿದ್ದಿತ್ತು. ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಅಲ್ಲಿಂದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಸೇರಿದಂತೆ ಒಟ್ಟು 20 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯಕ್ಕೆ ಕರೆತರಲಾಯಿತು. ಕೆವಿಜಿ ಆಸ್ಪತ್ರೆಯಲ್ಲಿ 16 ಹಾಗೂ ತಾಲೂಕು ಆಸ್ಪತ್ರೆಯಲ್ಲಿ 4 ಮಂದಿಯನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡವರ ಬಗ್ಗೆ ತೀವ್ರ ನಿಗಾವಹಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಇದು ಗಡಿಕಲ್ಲಿನಲ್ಲಿ ಕಳೆದ ಒಂದು ತಿಂಗಳಿನಲ್ಲಿ ನಡೆದ ಎರಡನೇ ಅತೀ ದೊಡ್ಡ ಅಪಘಾತವಾಗಿದೆ. ಇತ್ತೀಚೆಗೆ ಅದೇ ಜಾಗದಲ್ಲಿ ಸರೋಜ್ ಕುಮಾರ್ ಎಂಬ ವ್ಯಕ್ತಿ ಬೆಳಗ್ಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಲಾರಿ ಹಿಂದಿನಿಂದ ಬಂದು ಗುದ್ದಿತ್ತು. ಪರಿಣಾಮ ವ್ಯಕ್ತಿ ದಾರುಣವಾಗಿ ಸಾವನ್ನಪ್ಪಿದ್ದರು.