ಸುಳ್ಯ: ಕ್ಷೇತ್ರದ ಜನರು ವಿಶ್ವಾಸ ಇಟ್ಟು ನಮ್ಮನ್ನು ಗೆಲ್ಲಿಸಿದ್ದು ಕ್ಷೇತ್ರದ ಅಭಿವೃದ್ಧಿಯ ಬದ್ಧತೆ ಹೊಣೆಗಾರಿಕೆ ನನಗಿದೆ. ಆದರೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಬರೆದು ಅಪಪ್ರಚಾರ ಮಾಡುತ್ತಿದ್ದಾರೆ. ಈ ರೀತಿಯ ರಾಜಕೀಯ ಮಾಡಿ ಏನು ಸಾಧನೆ ಮಾಡಿದಂತಾಗುತ್ತದೆ?, ಅಭಿವೃದ್ಧಿಗೆ ಸಹಕಾರ ನೀಡಿ” ಎಂದು ಸಚಿವ ಎಸ್.ಅಂಗಾರ ಹೇಳಿದ್ದಾರೆ.
ಸುಳ್ಯದ ಅಜ್ಜಾವರ ಗ್ರಾಮದ ಬಸವನಪಾದೆಯಿಂದ – ಮುಳ್ಯ – ಅಟ್ಲೂರು ರಸ್ತೆಯನ್ನು ರೂ.55 ಲಕ್ಷದಲ್ಲಿ ಕಾಂಕ್ರೀಟೀಕರಣ ಗೊಳಿಸಲಾಗಿದ್ದು ಆ ರಸ್ತೆಯನ್ನು ಮಾ.೨೦ರಂದು ಉದ್ಘಾಟಿಸಿ ಬಳಿಕ ಮಾತನಾಡಿದರು. ಸುಳ್ಯ – ಜಟ್ಟಿಪಳ್ಳ- ಕೊಡಿಯಾಲಬೈಲು- ದುಗಲಡ್ಕ ಸಂಪರ್ಕ ರಸ್ತೆಯ ಬಗ್ಗೆ ವಾಟ್ಸಾಪ್ ನಲ್ಲಿ ಬರೆದು ಹಾಕುತ್ತಾರೆ. ಅದರಿಂದ ಏನು ಸಾಧನೆ ಮಾಡಿದಂತಾಗುತ್ತದೆ. ೭೦ ವರ್ಷದಿಂದ ಇವರು ಅಪಪ್ರಚಾರವೇ ಮಾಡಿದ್ದಲ್ಲದೆ ಅಭಿವೃದ್ಧಿ ಮಾಡಿದ್ದು ಏನು? ಎಂದು ಪ್ರಶ್ನಿಸಿದ ಸಚಿವರು ಆ ರಸ್ತೆಯಲ್ಲಿ ಮೊದಲು ಸೇತುವೆ ಕೆಲಸ ಮಾಡಿ, ಬಳಿಕ ರಸ್ತೆ ಅಭಿವೃದ್ಧಿ ಮಾಡುತ್ತೇವೆ. ಅದರ ಹೊಣೆಗಾರಿಕೆ ನಮಗಿದೆ” ಎಂದು ಸಚಿವರು ಭರವಸೆ ನೀಡಿದರು.
ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸತ್ಯವತಿ ಬಸವನಪಾದೆ, ಜಿ.ಪಂ. ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಮಂಡೆಕೋಲು ಗ್ರಾ.ಪಂ. ಅಧ್ಯಕ್ಷೆ ವಿನುತಾ ಪಾತಿಕಲ್ಲು, ಮಂಡೆಕೋಲು ಮಾಜಿ ಅಧ್ಯಕ್ಷ ಜಯರಾಜ್ ಕುಕ್ಕೆಟ್ಟಿ, ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ವೆಂಕಟ್ರಮಣ ಮುಳ್ಯ, ಗುತ್ತಿಗೆದಾರ ಸುಭೋದ್ ಶೆಟ್ಟಿ ಮೇನಾಲ ಇದ್ದರು.