ಪುಣೆ: 23 ವರ್ಷದ ಯುವತಿಯೊಬ್ಬಳ ಮಾನಹಾನಿ ಮಾಡುವ ಸಲುವಾಗಿ ಸಾಮಾಜಿಕ ಮಾಧ್ಯಮದಲ್ಲಿ ಆಕೆಯ ನಕಲಿ ವಿವಾಹದ ಪ್ರೊಫೈಲ್ ಪೋಸ್ಟ್ ಮಾಡಿದ್ದಾರೆ. ಈ ನಾಚಿಕೆಗೇಡಿನ ಘಟನೆ ಮಹಾರಾಷ್ಟ್ರದ ಪುಣೆ ಘೋರ್ಪಾಡಿ ಪ್ರದೇಶದಲ್ಲಿ ನಡೆದಿದೆ. 37 ವರ್ಷದ ವ್ಯಕ್ತಿಯೊಬ್ಬರು ಯುವತಿಗೆ ಅವಮಾನ ಮಾಡುವ ಸಲುವಾಗಿ ಆಕೆಯ ಮದುವೆಯ ನಕಲಿ ಪ್ರೊಫೈಲ್ ಸೃಷ್ಟಿಸಿದ್ದರು. ಈ ಪ್ರಕರಣದ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಈಗಾಗಲೇ ಆರೋಪಿಯನ್ನು ಚಂದನನಗರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡಿದ ಪೊಲೀಸರು, ಆರೋಪಿಗಳು ಮತ್ತು ಯುವತಿ ಒಂದೇ ಗುಂಪಿಗೆ ಸೇರಿದವರಾಗಿರುವುದರಿಂದ ಪರಸ್ಪರ ಪರಿಚಿತರಾಗಿದ್ದರು. ಆರೋಪಿಯು ವಿವಾಹಿತನಾಗಿದ್ದು, ಆದರೂ ತನ್ನೊಂದಿಗೆ ಸಂಬಂಧವಿಟ್ಟುಕೊಳ್ಳುವಂತೆ ಆತ 23 ವರ್ಷದ ಯುವತಿಯನ್ನು ಒತ್ತಾಯಿಸುತ್ತಿದ್ದ. ಇದಕ್ಕೆ ಆಕೆ ಒಪ್ಪಿರಲಿಲ್ಲ. ಹೀಗಾಗಿ, ಆಕೆಗೆ ಅವಮಾನ ಮಾಡಲು ಸಾಮಾಜಿಕ ಜಾಲತಾಣದಲ್ಲಿ ಆಕೆಯ ನಕಲಿ ಪ್ರೊಫೈಲ್ ಕ್ರಿಯೇಟ್ ಮಾಡಿ ಅದರಲ್ಲಿ ಆಕೆಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡುತ್ತಿದ್ದ ಎಂದಿದ್ದಾರೆ.
ನಕಲಿ ಪೋಸ್ಟ್ನಲ್ಲಿ, ಆ ಯುವತಿ ಈಗಾಗಲೇ ಮದುವೆಯಾಗಿ, ವಿಚ್ಛೇದನ ಪಡೆದಿದ್ದಾಳೆ. 45 ವರ್ಷಕ್ಕಿಂತ ಮೇಲ್ಪಟ್ಟ ವರನನ್ನು ಮತ್ತೆ ಮದುವೆಯಾಗಲು ಹುಡುಕುತ್ತಿದ್ದಾಳೆ ಎಂದು ಆತ ಬರೆದಿದ್ದ. ಆ ಯುವತಿಯ ಸಂಬಂಧಿಕರು ಮತ್ತು ಇತರರು ಆ ಪ್ರೊಫೈಲ್ ಅನ್ನು ನೋಡಿದಾಗ, ಅವರು ಆಕೆಗೆ ಫೋನ್ ಮಾಡಿ ಪ್ರಶ್ನಿಸಿದ್ದರು. ಇದರಿಂದ ಆಕೆಗೆ ಆ ನಕಲಿ ಪ್ರೊಫೈಲ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದೆಲ್ಲ ಆ 37 ವರ್ಷದ ವ್ಯಕ್ತಿಯ ಕೃತ್ಯ ಎಂದು ಅರ್ಥ ಮಾಡಿಕೊಂಡ ಆಕೆ ಆತನ ಬಳಿ ಹೋಗಿ ಮಾಡಿದ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳುವಂತೆ ಎಚ್ಚರಿಸಿದ್ದಾಳೆ.