ಬೆಂಗಳೂರು: ಹಿಜಾಬ್ ಧರಿಸಿಕೊಂಡು ಎಸ್ಎಸ್ಎಲ್ಸಿ ಪರೀಕ್ಷೆಗೆ ಬಂದರೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ನೀಡಿದೆ. 1995ರ ನಿಯಮ 11ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ಸಮವಸ್ತ್ರ ಜಾರಿ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಸರಕಾರ ನಿಗಪಡಿಸಿರುವ ಶಾಲಾ ಸಮವಸ್ತ್ರ ಕಡ್ಡಾಯವಾಗಿರಲಿದೆ. ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿಗಳು ನಿರ್ಧರಿಸಿರುವ ಸಮವಸ್ತ್ರ ಕಡ್ಡಾಯ ಮಾಡಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ನೀಡಿದೆ.
ಶಾಲಾ- ಕಾಲೇಜಿನಲ್ಲಿ ಹಿಜಾಬ್ ಧರಿಸುವಂತಿಲ್ಲ, ಸರ್ಕಾರದ ವಸ್ತ್ರ ಸಂಹಿತೆಯನ್ನು ಪ್ರಶ್ನೆ ಮಾಡುವಂತಿಲ್ಲ ಎಂದು ಮಾರ್ಚ್ 15ರಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಈ ಬೆನ್ನೆಲೆ ಕೋರ್ಟ್ ತೀರ್ಪಿಗೆ ಬೇಸರ ವ್ಯಕ್ತಪಡಿಸಿರುವ ಮುಸ್ಲಿಂ ಸಮುದಾಯ ಮುಖಂಡರು ಕರ್ನಾಟಕ ಬಂದ್ಗೆ ಕರೆ ನೀಡಿದ್ದರು. ಮುಸ್ಲಿಂ ಮುಖಂಡರು ಸ್ವಯಂಪ್ರೇರಿತ ಬಂದ್ಗೆ ಘೋಷಣೆ ಮಾಡಿದ್ದರು. ಇನ್ನೂ ಕೂಡ ಕೆಲವು ಕಡೆ ಕೋರ್ಟ್ ತೀರ್ಪಿಗೆ ಅಸಮಾಧಾನವಿದ್ದು, ಅನೇಕ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೇ ಗೈರಾಗಿದ್ದಾರೆ. ಹೀಗಿರುವಾಗಲೇ ಇಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದ್ದು, ಮುಂಬರುವ 2022ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಿಜಾಬ್ ಧರಿಸಿ ಬಂದರೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಆದೇಶ ಹೊರಡಿಸಿದೆ. ಈ ಸಲ ಏಪ್ರಿಲ್ 11 ರ ತನಕ ಪರೀಕ್ಷೆ ನಡೆಯಲಿದೆ. ರಾಜ್ಯಾದ್ಯಂತ ಒಟ್ಟು 15, 387 ಶಾಲೆಗಳ 8,73,846 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಸುಳ್ಯ ತಾಲೂಕಿನ ಆರು ಪರೀಕ್ಷೆ ಕೇಂದ್ರಗಳನ್ನು ತೆರೆಯಲಾಗಿದೆ. 1902 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.