ಬೆಂಗಳೂರು: ಶಾಲಾ ಕಾಲೇಜಿನಲ್ಲಿ ಹಿಜಾಬ್ ಗೆ ಅವಕಾಶವಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಸರಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ ಶಿಕ್ಷಣ ಸಂಸ್ಥೆಗಳಿಗೆ ಸಮವಸ್ತ್ರ ನಿರ್ಧರಿಸುವ ಅಗತ್ಯ ಇದೆ ಎಂದು ಬಲವಾಗಿ ಪ್ರತಿಪಾದನೆ ನಡೆಸಿದೆ. ಅಲ್ಲದೆ ಸರಕಾರದ ಆದೇಶ ಕಾನೂನು ಬದ್ಧವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಹಿಜಾಬ್ ಧಾರ್ಮಿಕ ಹಕ್ಕಿಗಾಗಿ ಒಂದಷ್ಟು ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಮುಸ್ಲಿಂ ವಿದ್ಯಾರ್ಥಿನಿಯರು ಶಾಲಾ-ಕಾಲೇಜಿಗೆ ಹಿಜಾಬ್ ಹಾಕಿದರೆ ನಾವು ಕೇಸರಿ ಶಾಲು ಹಾಕಿಕೊಂಡು ಬರುತ್ತೇವೆ ಎಂದು ಹಿಂದೂ ವಿದ್ಯಾರ್ಥಿಗಳ ವಾದ ಮಾಡಿದ್ದರು. ಕಳೆದ ಕೆಲವು ದಿನಗಳಿಂದ ಹಿಜಾಬ್ ಗಲಾಟೆ ದೇಶದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು. ಹಿಜಾಬ್ ಧರಿಸಿ ತರಗತಿ ಪ್ರವೇಶಿಸುವುದನ್ನು ನಿರ್ಬಂಧಿಸಿದ್ದ ಕೆಲ ಶಾಲೆ- ಕಾಲೇಜು ಆಡಳಿತ ಮಂಡಳಿಗಳ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ದಾಖಲಿಸಲಾಗಿತ್ತು.
ಈ ಬಗ್ಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ಮೂವರು ಸದಸ್ಯರ ವಿಸ್ತೃತ ನ್ಯಾಯಪೀಠ ಫೆ. 25ಕ್ಕೆ ವಿಚಾರಣೆ ಮುಗಿಸಿ, ತೀರ್ಪು ಕಾಯ್ದಿರಿಸಿತ್ತು.ತೀರ್ಪು ಪ್ರಕಟಣೆಗೆ ಸಮಯ ನಿಗದಿ ಮಾಡುತ್ತಿದ್ದಂತೆ ಬೆಂಗಳೂರು ನಗರ ಹಾಗೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಸಂಭ್ರಮಾಚರಣೆ ನಿರ್ಬಂಧಿಸಲಾಗಿದೆ. ಪಟಾಕಿಗಳನ್ನು ಸುಡುವುದು, ಸರಕಾರಿ ಬಸ್ ಅಥವಾ ಇತರ ವಾಹನಗಳಿಗೆ ಅಡೆತಡೆ ಉಂಟು ಮಾಡುವುದನ್ನು ಪ್ರತಿಬಂಧಿಸಲಾಗಿದೆ.