ನವದೆಹಲಿ: ಅಂತಾರಾಷ್ಟ್ರೀಯ ಇಂಧನ ಬೆಲೆಗಳ ಏರಿಕೆಗೆ ಅನುಗುಣವಾಗಿ ಅಡುಗೆ ಅನಿಲ (ಎಲ್ ಪಿಜಿ) ಪ್ರತಿ ಸಿಲಿಂಡರ್ ದರವನ್ನು ಮಂಗಳವಾರ ₹50ರಂತೆ ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದರಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಬ್ಸಿಡಿ ಇಲ್ಲದ 14.2 ಕೆ.ಜಿ. ತೂಕದ ಎಲ್ಪಿಜಿ ಸಿಲಿಂಡರ್ ಬೆಲೆ ₹ 949ಕ್ಕೆ ತಲುಪಿದೆ. ಕಳೆದ ಅಕ್ಟೋಬರ್ ನಿಂದೀಚೆಗೆ ಇದು ಮೊದಲ ಬಾರಿಗೆ ಏರಿಕೆಯಾಗಿದೆ. ಕಚ್ಛಾ ತೈಲದ ಬೆಲೆ ಏರಿಕೆಯಾಗುತ್ತಿದ್ದರೂ ಕಳೆದ ಕೆಲ ತಿಂಗಳಿನಿಂದ ಎಲ್ ಪಿಜಿ ದರ ಸ್ಥಿರವಾಗಿ ಉಳಿದಿತ್ತು. 5 ಕೆ.ಜಿ. ಸಿಲಿಂಡರ್ ಬೆಲೆ ₹ 349 ಆಗಿದ್ದರೆ, 10 ಕೆ.ಜಿ.ಯ ಸಿಲಿಂಡರ್ ಬೆಲೆ ₹ 669 ಆಗಿದೆ. 19 ಕೆ.ಜಿ. ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ₹ 2003.50 ರಷ್ಟಾಗಿದೆ.
ಸುಮಾರು ನಾಲ್ಕೂವರೆ ತಿಂಗಳ ನಂತರ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ 80 ಪೈಸೆಯಷ್ಟು ಹೆಚ್ಚಳವಾಗಿರುವುದಾಗಿ ವರದಿಯಾಗಿದೆ.
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹96.21, ಪ್ರತಿ ಲೀಟರ್ ಡೀಸೆಲ್ ಗೆ ₹87.47; ಮುಂಬೈನಲ್ಲಿ ಲೀಟರ್ ಪೆಟ್ರೋಲ್ ₹110.78, ಡೀಸೆಲ್ ₹94.94; ಕೋಲ್ಕತ್ತದಲ್ಲಿ ಪೆಟ್ರೋಲ್ ₹102.16 ಮತ್ತು ಡೀಸೆಲ್ ₹90.62; ಚೆನ್ನೈನಲ್ಲಿ ಪೆಟ್ರೋಲ್ ದರ ₹102.16, ಡೀಸೆಲ್ ದರ ₹92.19 ಆಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಗೆ ₹101.42 ಮತ್ತು ಡೀಸೆಲ್ಗೆ 85.80 ತಲುಪಿದೆ.
2021ರ ನವೆಂಬರ್ 2ರ ನಂತರ ಇದೇ ಮೊದಲ ಬಾರಿಗೆ ಇಂಧನ ದರದಲ್ಲಿ ಹೆಚ್ಚಳ ಮಾಡಲಾಗಿದೆ.