ಬೆಂಗಳೂರು: ಇಂಡಿಗೋ ವಿಮಾನದಲ್ಲಿ ಪ್ರಯಾಣ ಮಾಡಿದ್ದ ಬೆಂಗಳೂರು ಮೂಲದ ಪ್ರಯಾಣಿಕನೊಬ್ಬ ಇಂಡಿಗೋ ಸಂಸ್ಥೆಯ ವೆಬ್ಸೈಟ್ನ್ನೇ ಹ್ಯಾಕ್ ಮಾಡಿದ ಘಟನೆ ನಡೆದಿದೆ. ಪ್ರಯಾಣಿಕನ ಹೆಸರು ನಂದನ್ ಕುಮಾರ್ ಎಂದಾಗಿದ್ದು, ತಾನು ಹ್ಯಾಕ್ ಮಾಡಿದ್ದು ಯಾಕೆ ಮತ್ತು ಹೇಗೆ ಎಂಬುದನ್ನು ಸರಣಿ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಇಂಡಿಗೋ ವೆಬ್ಸೈಟ್ನಲ್ಲಿ ಎಷ್ಟು ಸುಲಭವಾಗಿ ತನಗೆ ಬೇಕಾದ ಸೂಕ್ಷ್ಮ ಮಾಹಿತಿಗಳನ್ನು ಪಡೆದೆ ಎಂದು ಹೇಳಿರುವ ನಂದನ್ ಕುಮಾರ್, ಏರ್ಲೈನ್ಸ್ ಅದನ್ನು ಸರಿಪಡಿಸಿಕೊಳ್ಳಬೇಕು. ಇನ್ನಷ್ಟು ಭದ್ರಪಡಿಸಬೇಕು ಎಂಬ ಸಲಹೆಯನ್ನೂ ನೀಡಿದ್ದಾರೆ. ಅಷ್ಟಕ್ಕೂ ನಂದನ್ ಕುಮಾರ್ ವೆಬ್ಸೈಟ್ ಹ್ಯಾಕ್ ಮಾಡಲು ಕಾರಣ ಬ್ಯಾಗ್ ಕಳೆದುಕೊಂಡಿದ್ದು. ನಂದನ್ ಬ್ಯಾಗ್ ಅವರ ಸಹಪ್ರಯಾಣಿಕರೊಟ್ಟಿಗೆ ಹೋಗಿತ್ತು. ಇದು ಕಣ್ತಪ್ಪಿನಿಂದ ಆದ ಎಡವಟ್ಟಾಗಿತ್ತು. ಆದರೆ ಬ್ಯಾಗ್ನ್ನು ಪಡೆಯಲು ಇಂಡಿಗೋ ಕೊಟ್ಟ ಸಹಕಾರ ಸೂಕ್ತವಾಗಿರಲಿಲ್ಲ. ನನ್ನ ಬ್ಯಾಗ್ನಲ್ಲಿ ಅನೇಕ ಮಹತ್ವದ ವಸ್ತುಗಳು ಇದ್ದುದರಿಂದ ಅದನ್ನು ಪಡೆಯಲೇಬೇಕಾಗಿತ್ತು. ಹೀಗಾಗಿ ಇಂಡಿಗೋ ವೆಬ್ಸೈಟ್ ಹ್ಯಾಕ್ ಮಾಡುವ ಮೂಲಕ ಸಹ ಪ್ರಯಾಣಿಕನ ಫೋನ್ ನಂಬರ್ ಪಡೆದೆ ಎಂದು ನಂದನ್ ಹೇಳಿದ್ದಾರೆ.