ನೆಲ್ಯಾಡಿ: ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದು ತಪ್ಪಿಸಿಕೊಂಡು ಬಂದಿದ್ದ ಲಾರಿಯೊಂದನ್ನು ನೆಲ್ಯಾಡಿಯಲ್ಲಿ ಸಾರ್ವಜನಿಕರು ಹಿಡಿದು ನಿಲ್ಲಿಸಿದ ಘಟನೆ ನಿನ್ನೆ ಸಂಜೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ -75ರ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಈಚರ್ ಲಾರಿ ಅಪ್ಪ-ಮಗ ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಗಡಿಯಾರ ನಿವಾಸಿ ದಿನೇಶ್ ಶೆಟ್ಟಿ ಅವರ ಪುತ್ರ ಅದ್ವೀತ್ (12) ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟಿದ್ದ. ಲಾರಿ ಚಾಲಕ ಕನಿಷ್ಟ ನಿಲ್ಲಿಸುವ ಔದಾರ್ಯವನ್ನು ತೋರಿಸದೆ ಸ್ಥಳದಿಂದ ಕಾಲ್ಕಿತ್ತಿದ್ದದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಲಾರಿ ಮಂಗಳೂರಿನಿಂದ ಬೆಂಗಳೂರಿನತ್ತ ತೆರಳುತ್ತಿತ್ತು. ಲಾರಿ ಪರಾರಿಯಾಗಿರುವ ಮಾಹಿತಿಯನ್ನು ಸ್ಥಳೀಯರು ರವಾನಿಸಿದ್ದು , ನೆಲ್ಯಾಡಿ ಬಳಿ ಆ ಲಾರಿಯನ್ನು ಸಾರ್ವಜನಿಕರು ತಡೆದು ನಿಲ್ಲಿಸಿದ್ದಾರೆ ಎನ್ನಲಾಗಿದೆ ಲಾರಿ ಓವರ್ ಟೇಕ್ ಮಾಡುವ ಭರದಲ್ಲಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ವಾರದ ಹಿಂದಷ್ಟೇ ಸಂಪಾಜೆಯಲ್ಲಿ ಸರೋಜ್ ಕುಮಾರ್ ಎಂಬುವವರಿಗೆ ಈಚರ್ ಲಾರಿಯೊಂದು ಇದೇ ರೀತಿಯಲ್ಲಿ ಡಿಕ್ಕಿ ಹೊಡೆದು ಸಾವಿಗೆ ಕಾರಣವಾಗಿತ್ತು. ಲಾರಿ ಚಾಲಕನನ್ನು ಘಟನೆ ನಡೆದ ಎರಡು ದಿನಗಳ ಬಳಿಕ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.