ನಾರ್ತ್ ಸೌಂಡ್: ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಭಾರತದ ಯುವಪಡೆಯು ಮತ್ತೊಂದು ಬಾರಿ ಕಿರೀಟ ಧರಿಸುವ ಛಲದಲ್ಲಿದೆ.
ಇಲ್ಲಿಯ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ನಲ್ಲಿ ಯಶ್ ಧುಳ್ ನಾಯಕತ್ವದ ಭಾರತ ತಂಡವು ಇಂಗ್ಲೆಂಡ್ ಎದುರು ಸೆಣಸಲಿದೆ. ಸತತ ನಾಲ್ಕನೇ ಬಾರಿ ಭಾರತವು ಫೈನಲ್ ಪ್ರವೇಶಿಸಿದೆ.
ಭಾರತಕ್ಕೆ ಫೈನಲ್ ಹಾದಿಯು ಸುಗಮವಾಗಿರಲಿಲ್ಲ. ಗುಂಪು ಹಂತದ ಟೂರ್ನಿ ನಡೆದಾಗ ನಾಯಕ ಯಶ್ ಧುಳ್ ಮತ್ತು ನಾಲ್ವರು ಆಟಗಾರರು ಕೋವಿಡ್ಗೆ ತುತ್ತಾಗಿದ್ದರು. ಚೇತರಿಸಿಕೊಂಡ ನಂತರ ಮರಳಿದ ಅವರು ಗೆಲುವಿನ ರೂವಾರಿಗಳಾಗಿದ್ದಾರೆ. ಸೆಮಿಫೈನಲ್ನಲ್ಲಿ ಶತಕ ಬಾರಿಸಿದ ಯಶ್ ಮತ್ತು 94 ರನ್ ಗಳಿಸಿದ ಶೇಖ್ ರಶೀದ್ ಜಯದ ಕಾಣಿಕೆ ನೀಡಿದ್ದರು. ಅವರಲ್ಲದೇ ಆರಂಭಿಕ ಜೋಡಿ ಅಂಗಕ್ರಿಷ್ ರಘುವಂಶಿ ಮತ್ತು ಹರ್ನೂರ್ ಸಿಂಗ್ ಅವರು ಸೆಮಿಫೈನಲ್ನಲ್ಲಿ ವೈಫಲ್ಯ ಅನುಭವಿಸಿದ್ದರು. ಆದರೆ ಟೂರ್ನಿಯಲ್ಲಿ ಅವರು ಉತ್ತಮವಾಗಿ ಆಡಿದ್ದಾರೆ. ಫೈನಲ್ ನಲ್ಲಿ ತಮ್ಮ ಲಯಕ್ಕೆ ಮರಳುವ ವಿಶ್ವಾಸವಿದೆ.