ಕೈವ್: ರಷ್ಯಾದ ಟ್ಯಾಂಕರ್ ಗಳು ತನ್ನ ದೇಶದ ಮೇಲೆ ಆಕ್ರಮಣ ಮಾಡುವುದನ್ನು ತಡೆಯಲು, ಒಬ್ಬ ಉಕ್ರೇನಿಯನ್ ಸೈನಿಕ ಪ್ರಾಣಾರ್ಪಣೆ ಮಾಡಿ ದೇಶ ಭಕ್ತಿಯನ್ನು ಮೆರೆದಿದ್ದಾರೆ. ಆತನ ದೇಶ ಭಕ್ತಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಪ್ರಸ್ತುತ ರಷ್ಯಾ ಆಕ್ರಮಿಸಿಕೊಂಡಿರುವ ಕ್ರೈಮಿಯಾ ಪ್ರದೇಶದಿಂದ ರಷ್ಯನ್ ಪಡೆಗಳು ಆಕ್ರಮಣ ಮಾಡುವುದನ್ನು ತಡೆಯಲು, ಉಕ್ರೇನ್ ಮುಖ್ಯ ಭೂಭಾಗಕ್ಕೆ ಸಂಪರ್ಕಿಸುವ ಸೇತುವೆಯನ್ನು ಸ್ಫೋಟಿಸುವ ನಿರ್ಧಾರಕ್ಕೆ ಬರಲಾಯಿತು. ಉಕ್ರೇನಿಯನ್ ಮಿಲಿಟರಿಯ ಹೇಳಿಕೆಗಳ ಪ್ರಕಾರ ರಷ್ಯಾದ ಟ್ಯಾಂಕರ್ ಗಳು ಆಕ್ರಮಣ ಮಾಡಿದಾಗ ಮೆರೈನ್ ಬೆಟಾಲಿಯನ್ ಎಂಜಿನಿಯರ್ ಆಗಿದ್ದ ವಿಟಾಲಿ ಸ್ಕಕುನ್ ವೊಲೊಡಿಮಿರೊವಿಚ್ ಅವರನ್ನು ದಕ್ಷಿಣ ಪ್ರಾಂತ್ಯದಲ್ಲಿನ ಹೆನಿಚೆಸ್ಕ್ ಸೇತುವೆಗೆ ನಿಯೋಜಿಸಲಾಯಿತು.
ರಷ್ಯಾದ ಟ್ಯಾಂಕ್ ತಡೆಯುವ ಏಕೈಕ ಮಾರ್ಗವೆಂದರೆ ಸೇತುವೆಯನ್ನು ಸ್ಫೋಟಿಸುವುದು ಎಂದು ಸೈನ್ಯವು ನಿರ್ಧರಿಸಿತು. ಅದರಂತೆ, ವೊಲೊಡಿಮಿರೊವಿಚ್ ಈ ಕಾರ್ಯವನ್ನು ಮಾಡಲು ಸ್ವಯಂಪ್ರೇರಿತರಾಗಿ ಮುಂದೆ ಬಂದರು ಎಂದು ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.