ಕೀವ್: ವಿಶ್ವದ ಅತಿದೊಡ್ಡ ವಿಮಾನ, ಉಕ್ರೇನ್ ನ ‘ಆಂಟೊನೊವ್-225’ ಸರಕು ವಿಮಾನವನ್ನು ರಷ್ಯಾದ ಸೇನಾ ಪಡೆಗಳು ಕೀವ್ ಹೊರವಲಯದಲ್ಲಿ ಭಾನುವಾರ ನಾಶ ಮಾಡಿವೆ ಎಂದು ಉಕ್ರೇನ್ ನ ಸರಕಾರಿ ಸ್ವಾಮ್ಯದ, ಶಸ್ತ್ರಾಸ್ತ್ರ ತಯಾರಕ ಸಂಸ್ಥೆ ‘ಉಕ್ರೊಬೊರಾನ್ ಪ್ರೊಮ್’ ಹೇಳಿದೆ.
ಈ ಬೃಹತ್ ವಿಮಾನಕ್ಕೆ ಉಕ್ರೇನ್ ‘ಮ್ರಿಯಾ’ ಎಂದು ಹೆಸರಿಟ್ಟಿತ್ತು. ಇದರ ಅರ್ಥ, ಉಕ್ರೇನ್ ಭಾಷೆಯಲ್ಲಿ ‘ಕನಸು’ ಎಂದು.
‘ಉಕ್ರೇನ್ ವಾಯುಯಾನದ ಹೆಗ್ಗುರುತು ಎನಿಸಿಕೊಂಡಿದ್ದ AN-225 ಅನ್ನು ಕೀವ್ ಬಳಿಯ ಗೊಸ್ಟೊಮೆಲ್ ನಲ್ಲಿರುವ ಆಂಟೊನೊವ್ ವಿಮಾನ ನಿಲ್ದಾಣದಲ್ಲಿ ರಷ್ಯಾದ ಆಕ್ರಮಣಕಾರರು ನಾಶಪಡಿಸಿದ್ದಾರೆ’ ಎಂದು ಉಕ್ರೊಬೋರಾನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಜಗತ್ತಿನಲ್ಲೇ ಅತ್ಯಂತ ವಿಶೇಷ ಎನಿಸಿದ್ದ ಈ ವಿಮಾನವು 84 ಮೀಟರ್ ಉದ್ದ (276 ಅಡಿ) ಇತ್ತು. ಗಂಟೆಗೆ 850 ಕಿಲೋಮೀಟರ್ (528 ಎಂಪಿಎಚ್) ವೇಗದಲ್ಲಿ 250 ಟನ್ ಗಳಷ್ಟು (551,000 ಪೌಂಡ್ ಗಳು) ಸರಕುಗಳನ್ನು ಸಾಗಿಸಬಲ್ಲ ಶಕ್ತಿ ಹೊಂದಿತ್ತು.