ಚಾಮರಾಜನಗರ: ನವ ವಧುವೊಬ್ಬರು ಮದುವೆಗೆ ಬರಬೇಡಿ ಎಂದು ಮನವಿ ಮಾಡಿದ್ದಾರೆ. ಮದುಮಗಳು ಹೀಗೆ ಮನವಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಟುಂಬಸ್ಥರು ಈಗಾಗಲೇ ಮದುವೆ ಆಮಂತ್ರಣ ಪತ್ರಿಕೆಯನ್ನು ಸಂಬಂಧಿಕರಿಗೆ ಹಂಚಿದ್ದರು. ಆದರೆ ಕೋವಿಡ್ ಕಾರಣದಿಂದ ಇದೀಗ ಮನೆಯಲ್ಲಿಯೇ ಸರಳ ವಿವಾಹ ಮಾಡಿಕೊಳ್ಳಲು ವಧು-ವರ ಸೇರಿದಂತೆ ಎರಡೂ ಕಡೆಯ ಕುಟುಂಬಸ್ಥರೆಲ್ಲ ನಿರ್ಧಾರ ತೆಗೆದುಕೊಂಡಿದ್ದಾರೆ.
ಚಾಮರಾಜನಗರ ತಾಲೂಕಿನ ವಿ.ಸಿ. ಹೊಸೂರು ಗ್ರಾಮದ ಸುಶ್ಮಾ ಹಾಗೂ ಚನ್ನಪ್ಪನಪುರದ ಶ್ರೇಯಸ್ ನಡುವೆ ನಿಶ್ಚಯವಾಗಿರುವ ಮದುವೆ ಇದಾಗಿದೆ. ಚಾಮರಾಜನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮದುವೆ ನೆರವೇರಬೇಕಿತ್ತು. ಆದ್ರೆ ಸದ್ಯ ವಧುವಿನ ಸ್ವಗೃಹದಲ್ಲೆ ಸರಳವಾಗಿ ವಿವಾಹವಾಗಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರಿಂದ ಮದುವೆ ಕಾರ್ಯಕ್ರಮಕ್ಕೆ ಬಾರದೆ, ಇದ್ದಲ್ಲಿಯೇ ಆಶೀರ್ವದಿಸಿ ಎಂದು ವಧು ಮನವಿ ಮಾಡಿಕೊಂಡಿದ್ದಾರೆ.