ಮಡಿಕೇರಿ: ಕರಾವಳಿಯಿಂದ ಆರಂಭವಾಗಿ ರಾಜ್ಯದ ವಿವಿಧ ಕಾಲೇಜುಗಳಲ್ಲಿ ವಿವಾದಕ್ಕೆ ಕಾರಣವಾಗಿರುವ ಹಿಜಾಬ್ ವಿವಾದ ಈಗ ಮಡಿಕೇರಿಗೂ ವ್ಯಾಪಿಸಿದೆ. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ವಿದ್ಯಾರ್ಥಿಗಳು ಇಂದು ಕೇಸರಿ ಶಲ್ಯದೊಂದಿಗೆ ಆಗಮಿಸಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರ ಕ್ರಮವನ್ನು ವಿರೋಧಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿಯರು ಸಮವಸ್ತ್ರ ಧರಿಸುವುದು ಕಡ್ಡಾಯವಾಗಿದ್ದು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದರೆ ನಾವು ಕೂಡ ಕೇಸರಿ ಶಲ್ಯ ಹಾಕಿಕೊಂಡು ಬರುತ್ತೇವೆ ಎಂದರು. ಸುಮಾರು 30 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬಂದಿದ್ದಾರೆ. ಇಂದು ನಾವು 50 ಕ್ಕೂ ಹೆಚ್ಚು ಮಂದಿ ಕೇಸರಿ ಶಲ್ಯ ಹಾಕಿಕೊಂಡು ಬಂದಿದ್ದೇವೆ. ನಾಳೆಯಿಂದ ಎಲ್ಲರೂ ಹಾಕುತ್ತೇವೆ ಎಂದು ತಿಳಿಸಿದರು. ಈ ಬಗ್ಗೆ ಮಾತನಾಡಿದ ಪ್ರಾಂಶುಪಾಲ ಡಾ ಜಗತ್ ತಿಮ್ಮಯ್ಯ, ಮನವೊಲಿಸುವ ಕಾರ್ಯ ಮಾಡಿದ್ದೇವೆ. ಸರಕಾರ ಸಮವಸ್ತ್ರ ಕಡ್ಡಾಯಗೊಳಿಸಿದೆ. ಆದರೆ ನಮ್ಮ ಕಾಲೇಜಿನಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಂಚಿಕೆಯಾಗಿಲ್ಲ. ಸಮವಸ್ತ್ರ ಬಂದ ನಂತರ ಸರಕಾರದ ನಿಯಮವನ್ನು ಪಾಲಿಸಲಾಗುವುದು. ನಿಯಮ ಮೀರಿ ವಿದ್ಯಾರ್ಥಿಗಳು ನಡೆದುಕೊಂಡರೆ ಸರಕಾರದ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.