ಕೊಲ್ಲಮೊಗ್ರು: ಇಲ್ಲಿನ ಪೇಟೆಯಾದ್ಯಂತ ಹೋರಿಗಳ ಕಾಟ ಶುರುವಾಗಿದ್ದು ಶಾಲೆಗೆ ಹೋಗುವ ಮಕ್ಕಳಿಗೆ ಜೀವ ಭಯ ಶುರುವಾಗಿ ಬಿಟ್ಟಿದೆ. ಹೋರಿ ಏನು ಮಾಡಿ ಬಿಡುತ್ತದೋ ಅನ್ನುವ ಆತಂಕದಿಂದ ಮಕ್ಕಳು ಶಾಲೆಗೆ ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಕೊಲ್ಲಮೊಗ್ರದ ಬಂಗ್ಲೆಗುಡ್ಡೆ ಹಿ.ಪ್ರಾ ಶಾಲೆಗೆ ಬರುವ ವಿದ್ಯಾರ್ಥಿಗಳು ಶಾಲೆಗೆ ಮನವಿ ಮಾಡಿದ್ದು, ಹೋರಿ ತಿವಿಯುವ ಭಯದಲ್ಲಿ ಶಾಲೆಗೆ ಬರಲಾಗುತ್ತಿಲ್ಲ ಎಂದು ಶಾಲಾ ಆಡಳಿತ ಮಂಡಳಿಗೆ ಮನವಿ ನೀಡಿದ್ದಾಗಿ ತಿಳಿದು ಬಂದಿದೆ. ಈ ಬಗ್ಗೆ ತಹಶಿಲ್ದಾರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಗ್ರಾ.ಪಂ ಗೆ ಶಾಲೆಯಿಂದ ಮನವಿ ನೀಡುವುದಾಗಿ ಶಾಲೆಯವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಕೊಲ್ಲಮೊಗ್ರು ಹಾಲು ಉತ್ಪಾದಕರ ಸಂಘದಿಂದ ಗ್ರಾ.ಪಂ ಗೆ ಮನವಿ ನೀಡಲಾಗಿದ್ದು ಹೋರಿಗಳು ತೊಂದರೆ ನೀಡುತಿದ್ದು ಕ್ರಮ ಕೈಗೊಳ್ಳುವಂತೆ ಮನವಿ ನೀಡಿದ್ದು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.