ಕೋಲಾರ: ಸರಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ 3 ತಿಂಗಳ ಗಂಡು ಮಗುವೊಂದು ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಮಧ್ಯಾಹ್ನ ನಡೆದಿದೆ. ನಿನ್ನೆ 3 ತಿಂಗಳ ಲಸಿಕೆ ಪಡೆದ ಮಗು ರಾತ್ರಿ ನಿದ್ದೆ ಮಾಡದೆ ಒಂದೇ ಸಮನೆ ಅಳುತ್ತಿತ್ತು. ಇದರ ಪರಿಣಾಮ ಇಂದು ಪುನಃ ಮಗುವನ್ನು ಆಸ್ಪತ್ರೆಗೆ ಕರೆತಂದು ಪೋಷಕರು ವೈದ್ಯರಿಗೆ ತೋರಿಸಿದ್ದರು.
ಆದರೆ, ಜ್ವರದಿಂದ ಬಳಲುತ್ತಿದ್ದ ಮಗುವಿಗೆ ಏನೂ ಆಗಿಲ್ಲವೆಂದು ಸಮಜಾಯಿಸಿ ಕೊಟ್ಟ ಡಾಕ್ಟರ್ ಸೌಮ್ಯ, ಹೆಚ್ಚಿನ ಚಿಕಿತ್ಸೆ ಬೇಕಾದರೆ ಶ್ರೀನಿವಾಸಪುರದ ಖಾಸಗಿ ಆಸ್ಪತ್ರೆಗೆ ಹೋಗಿ ಎಂದು ತಿಳಿಸಿದ್ದಾರೆ. ಕೂಡಲೆ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮಗು ಸಾವನ್ನಪ್ಪಿದೆ. ಸರಕಾರಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದ್ದರೆ ಮಗು ಬದುಕುತ್ತಿತ್ತು ಎಂದು ಪೋಷಕರು ಆರೋಪಿಸಿದ್ದಾರೆ. ಸೋಮಯಾಜಲಹಳ್ಳಿ ಗ್ರಾಮದ ಸುಬ್ರಮಣಿ ಹಾಗೂ ಗಂಗರತ್ನ ದಂಪತಿಗಳ ಗಂಡು ಮಗು ಇದಾಗಿದ್ದು, ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ದ ಪೋಷಕರು ಗಂಭೀರ ಅರೋಪ ಮಾಡಿದ್ದಾರೆ.