ಕೊಕ್ಕಡ: ಇಲ್ಲಿನ ಕೊಕ್ಕಡ ಗ್ರಾಮ ಪಂಚಾಯತ್ ನಲ್ಲಿ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವನ್ನು ಶಾಸಕ ಹರೀಶ್ ಪೂಂಜಾ ಬುಧವಾರ ಉದ್ಘಾಟಿಸಿದರು.
ಕೊಕ್ಕಡ ಹೋಬಳಿ ಕೇಂದ್ರ ಆಗಿದ್ದು ಇಂದು ಶೈಕ್ಷಣಿಕವಾಗಿ ಬೆಳೆಯುತ್ತಿದೆ. ಹೀಗಾಗಿ ಈ ಪ್ರದೇಶದಲ್ಲಿ ಡಿಜಿಟಲ್ ಗ್ರಂಥಾಲಯ ಅತ್ಯಾವಶ್ಯಕವಾಗಿದೆ. ಈ ಡಿಜಿಟಲ್ ಗ್ರಂಥಾಲಯದ ಸದುಪಯೋಗವನ್ನು ಗ್ರಾಮದ ಜನತೆ ಪಡೆದುಕೊಳ್ಳಬೇಕೆಂದು ಶಾಸಕ ಹರೀಶ್ ಪೂಂಜಾ ತಿಳಿಸಿದರು.
ಈ ಸಂದರ್ಭ ಕೊಕ್ಕಡ ಗ್ರಾಮದ 4 ಬೂತ್ಗಳಿಂದ ತಲಾ 2 ಕುಟುಂಬಗಳಿಗೆ 5 ವರ್ಷದಿಂದ ಈಚೆಗೆ ಪರಿಶಿಷ್ಟ ಜಾತಿ ಮಿಸಲಿದ್ದ ಅನುದಾನ ಪಡೆಯದೇ ಇರುವ ಕುಟುಂಬಕ್ಕೆ ಸೌಲಭ್ಯ ಒದಗಿಸುವ ಹಾಗೂ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಆಗುವ ನೆಲೆಯಲ್ಲಿ ಸೋಲಾರ್ ಲೈಟ್ ಗಳನ್ನು ವಿತರಣೆ ಮಾಡಲಾಯಿತು. ಅಲ್ಲದೆ ಸುಮಾರು ವರ್ಷಗಳ ಕಾಲ ಪಂಚಾಯತ್ ನಲ್ಲಿ ನೀರು ಸರಬರಾಜು ಮಾಡುತ್ತಿರುವ ಅಂಗಾರ ಅವರನ್ನು ಗೌರವಿಸಲಾಯಿತು. ಕೊಕ್ಕಡ ಗ್ರಾಮಪಂಚಾಯತ್ ಅಧ್ಯಕ್ಷ ಯೋಗೀಶ್ ಆಳಂಬಿಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪವಿತ್ರ, ಕೊಕ್ಕಡ ಸಿ ಎ ಬ್ಯಾಂಕ್ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಜೆ, ಪಂಚಾಯತ್ ಅಭಿವೃದಿ ಅಧಿಕಾರಿ ದೀಪಕ್ ರಾಜ್, ಪಂಚಾಯತ್ ಸದಸ್ಯರಾದ ಪ್ರಭಾಕರ್ , ಲತಾ, ವನಜಾಕ್ಷಿ, ಜಗದೀಶ್, ಶರತ್, ವಿಶ್ವನಾಥ ಕಕ್ಕುದೋಳಿ, ಬೇಬಿ, ಪುರುಷೋತ್ತಮ. ಜಾನಕಿ, ಪಂಚಾಯತ್ ಕಾರ್ಯದರ್ಶಿ ಭಾರತೀ, ಗ್ರಂಥಾಲಯ ಪಾಲಕಿ ಮಾಧವಿ , ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು. ಕೇಶವ ಹಳ್ಳಿಗೇರಿ ನಿರೂಪಿಸಿದರು.