ಕಾಸರಗೋಡು: ಭಾರತೀಯ ಜನತಾ ಪಕ್ಷ (ಬಿಜೆಪಿ) ಶಕ್ತಿ ಕೇಂದ್ರವಾಗಿದ್ದ ಕಾಸರಗೋಡು ಹಾಗೂ ಮಂಜೇಶ್ವರ ಮಂಡಲದ ವಿವಿಧ ನಾಯಕರುಗಳು ತಮ್ಮ ಹುದ್ದೆಗಳಿಗೆ ರಾಜಿನಾಮೆ ಘೋಷಿಸಿದ್ದು ಬಿಜೆಪಿ ಪಾಳಯದಲ್ಲಿ ಆತಂಕ ಮೂಡಿಸಿದೆ.
ಈ ಎರಡು ಮಂಡಲಗಳಲ್ಲಿ ಬಲಿದಾನಿಗಳನ್ನು ಹಾಗೂ ಅವರ ಅನಾಥ ಕುಟುಂಬಗಳನ್ನು ಅವಗಣಿಸಿ ಪಕ್ಷದ ಉನ್ನತ ನೇತಾರರು ಎಡ-ಬಲ ರಂಗದೊಂದಿಗೆ ಕೈಜೋಡಿಸಿರುವ ಕಾರಣ ಮುಂದಿಟ್ಟು ಕಳೆದ ಒಂದು ವರ್ಷದಿಂದ ಪಕ್ಷದೊಳಗೆ ನಿರಂತರ ಚರ್ಚೆ ನಡೆದಿತ್ತು. ಆದರೆ ಈ ಬಗ್ಗೆ ಯಾವುದೇ ತೀರ್ಮಾನ ನಡೆಯದಿದ್ದು ಮೊನ್ನೆ ಪಕ್ಷದ ಯುವ ಪ್ರಭಾವಿ ನಾಯಕನಾದ ಕಾಸರಗೋಡು ಅಣಂಗೂರಿನ ಜ್ಯೋತಿಷ್ ಸಾವಿನಲ್ಲೂ ಬಿಜೆಪಿ ಪಕ್ಷದ ಉನ್ನತ ನಾಯಕರ ನಿಲುವನ್ನು ಪ್ರತಿಭಟಿಸಿ ಪಾರ್ಟಿಯ ವಿವಿಧ ಹುದ್ದೆಯ ಯುವ ನಾಯಕರು ತಮ್ಮ ಸ್ಥಾನಗಳಿಗೆ ರಾಜಿನಾಮೆ ಘೋಷಿಸುವ ಮೂಲಕ ಇದೀಗ ತಮ್ಮ ಅಸಮಾಧಾನ ಹೊರಗೆಡಹಿದ್ದಾರೆ.
ಹುಟ್ಟಿನಿಂದ ಈವರೆಗೆ ಸಂಘಟನೆ ಹಾಗೂ ಕಾರ್ಯಕರ್ತರಿಗೆ ಬೇಕಾಗಿ ಮಾತ್ರ ತನ್ನ ಜೀವನವನ್ನು ಮುಡಿಪಾಗಿಟ್ಟ ಕಾರ್ಯಕರ್ತರು ಯಾವ ರಾತ್ರಿ ಕರೆದರೂ ಕೂಡಲೇ ಅವರ ಕಷ್ಟಕ್ಕೆ ಸ್ಪಂದಿಸುವ ಕಾಸರಗೋಡಿನ ದೀಮಂತ ನಾಯಕ. ಕುಂಬಳೆ ವಿಷಯದಲ್ಲಿ ಪಕ್ಷದಿಂದ ಕಾರ್ಯಕರ್ತರಿಗೆ ಆಗುವ ನೋವಿಗೆ ಮನನೊಂದು ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಪಿ ರಮೇಶ್ , ಸುರೇಶ್ ಶೆಟ್ಡಿ ಹೆರೂರು, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ನವೀನ್ ರಾಜ್ ಮಂಜೇಶ್ವರ ಜತೆಗೆ ಕಿಶೋರ್ ಭಗವತಿ, ಮಂಜೇಶ್ವರ ಐಟಿ ಸೆಲ್ ಪ್ರಮುಖ್ ಜಯರಾಜ್ ಶೆಟ್ಟಿ ಕುಳೂರು, ಲೊಕೇಶ್ ನೋಂಡಾ, ಪದ್ಮನಾಭ ಕಡಪ್ಪುರ, ಸಂತೋಷ್ ದೈಗೋಳಿ, ನವೀನ್ ಬೆಜ್ಜ, ಯತೀಶ್ ಭಂಡಾರಿ ಕೌಡೂರು ಬೀಡು ಮೊದಲಾದವರು ಇದುವರೆಗೆ ರಾಜಿನಾಮೆ ಘೋಷಿಸಿರುವವರಲ್ಲಿ ಪ್ರಮುಖರಾಗಿದ್ದಾರೆ. ಈ ಬಗ್ಗೆ ಪಕ್ಷದ ಉನ್ನತ ಸಮಿತಿ ರಾಜಿನಾಮೆ ಅಂಗೀಕರಿಸಿದ ಬಗ್ಗೆ ತಿಳಿದು ಬಂದಿಲ್ಲ.