ಶ್ರೀಹರಿಕೋಟ: ಭೂವೀಕ್ಷಣಾ ಉಪಗ್ರಹ ‘ಇಒಎಸ್–04’ ಸೇರಿದಂತೆ ಒಟ್ಟು ಮೂರು ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸೋಮವಾರ ಮುಂಜಾನೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.
2022ರಲ್ಲಿ ಇಸ್ರೊ ನಡೆಸಿದ ಮೊದಲ ಉಪಗ್ರಹ ಉಡಾವಣೆ ಇದಾಗಿದೆ. ಇಒಎಸ್–04, ಇನ್ಸ್ಪೈರ್ಸ್ಯಾಟ್–1 ಹಾಗೂ ಐಎನ್ಎಸ್–2ಬಿ ಉಪಗ್ರಹಗಳನ್ನು ಹೊತ್ತ ‘ಪಿಎಸ್ಎಲ್ ವಿ–ಸಿ52’ ರಾಕೆಟ್ ಬೆಳಿಗ್ಗೆ 5.59ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು ಎಂದು ಇಸ್ರೊ ತಿಳಿಸಿದೆ. ಇದೊಂದು ಅದ್ಭುತ ಸಾಧನೆ ಎಂದೂ ಸಂಸ್ಥೆ ಬಣ್ಣಿಸಿದೆ.
ಮೂರೂ ಉಪಗ್ರಹಗಳನ್ನು ‘ಪಿಎಸ್ಎಲ್ ವಿ–ಸಿ52’ ಬೆಳಿಗ್ಗೆ 6.17ರ ವೇಳೆಗೆ ಕಕ್ಷೆಗೆ ಸೇರಿಸಿದೆ. ‘ಇಒಎಸ್–04’ ಉಪಗ್ರಹವನ್ನು 529 ಕಿ.ಮೀ. ಎತ್ತರದ ಧ್ರುವೀಯ ಕಕ್ಷೆಗೆ ಸೇರಿಸಿದೆ ಎಂದು ಇಸ್ರೊ ಹೇಳಿದೆ. ಈವರೆಗೆ ಭೂವೀಕ್ಷಣಾ ಕಾರ್ಯ ನಡೆಸುತ್ತಿದ್ದ ‘ಇನ್ಸಾಟ್–4ಬಿ’ಯ ಕಾರ್ಯಾವಧಿ ಮುಗಿದಿದ್ದು, ಜನವರಿ 24 ರಿಂದ ಸೇವೆಯನ್ನು ಹಂತ ಹಂತವಾಗಿ ನಿಲ್ಲಿಸಲಾಗಿತ್ತು. ಇದರ ಬದಲಿಗೆ ಈಗ ‘ಇಒಎಸ್–04’ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. ಇದು 1,710 ಕೆ.ಜಿ. ತೂಕ ಹೊಂದಿದೆ. ಇನ್ನಿತರ ಎರಡು ಉಪಗ್ರಹಗಳ ಪೈಕಿ ‘ಇನ್ ಸ್ಪೈರ್ ಸ್ಯಾಟ್ –1’ ಅನ್ನು ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯು ಕೊಲೊರಾಡೊ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ‘ಐಎನ್ಎಸ್–2ಬಿ’ ಉಪಗ್ರಹವನ್ನು ಭಾರತ ಮತ್ತು ಭೂತಾನ್ ಜಂಟಿಯಾಗಿ ಅಭಿವೃದ್ಧಿಪಡಿಸಿವೆ.