ಶಿರಸಿ: ರಾಜ್ಯದಲ್ಲಿ ಒಂದೆಡೆ ಕರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಈ ನಡುವೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಯಿಗಳಿಗೂ ವೈರಸ್ ಕಾಟ ಶುರುವಾಗಿದೆ. ಲಸಿಕೆ ನೀಡದಿದ್ದಲ್ಲಿ ನಾಯಿಗಳ ಸಾವು ಗ್ಯಾರಂಟಿ ಎಂದು ವೈದ್ಯರು ಹೇಳಿದ್ದಾರೆ. ಸೋಂಕಿಗೆ ತುತ್ತಾಗುವ ನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಶ್ವಾನಪ್ರಿಯರನ್ನು ಈ ವಿಚಾರ ಕಂಗಾಲಾಗಿಸಿದೆ.
ಕಳೆದ ೩ ವರ್ಷಗಳಿಂದ ಜನಸಾಮಾನ್ಯರನ್ನು ಪರಿ ಪರಿಯಾಗಿ ಪೀಡಿಸುತ್ತಿರುವ ಕರೋನಾದಿಂದಾಗಿ ಜನ ಜೀವನವೇ ಅಸ್ತವ್ಯಸ್ತವಾಗಿದೆ. ಈ ಬಾರಿ ಕಾಣಿಸಿರುವ ಮಹಾಮಾರಿ ಜೀವಕ್ಕೇನು ಅಪಾಯ ತರದಿದ್ದರೂ, ಸರಕಾರ ಸಾಕಷ್ಟು ಎಚ್ಚರಿಕೆಯ ಹೆಜ್ಜೆಯನ್ನು ಇರಿಸುವಂತೆ ಮಾಡಿದೆ. ಇದು ರಾಜ್ಯದ ಜನರ ಪರಿಸ್ಥಿತಿಯಾದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಯಿಗಳೂ ಕೂಡಾ ಕೆನೈನ್ ಪಾರ್ವೊ ವೈರಸ್ನಿಂದಾಗಿ ಸಂಕಷ್ಟಕ್ಕೀಡಾಗುತ್ತಿವೆ.