ಸುಳ್ಯ: ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಉಮೇಶ್ ವಾಗ್ಲೆಯವರು ಇಂದು ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲ ತಿಂಗಳಿಂದ ಅಸೌಖ್ಯಕ್ಕೊಳಗಾಗಿದ್ದ ಅವರು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ್ದರು. ವಾರದ ಹಿಂದೆ ಅಸೌಖ್ಯ ಉಲ್ಬಣಿಸಿ ಸುಳ್ಯ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಅಲ್ಲಿ ಇಂದು ಅವರು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.
ಬಿಜೆಪಿಯ ಕಟ್ಟಾ ಅನುಯಾಯಿಯಾಗಿದ್ದ ಅವರು ಸುದೀರ್ಘ ಕಾಲ ಪಕ್ಷದ ಸಂಘಟನೆ ಮತ್ತು ಚುನಾವಣೆಯ ಉಸ್ತುವಾರಿಯಾಗಿ ಕೆಲಸ ನಿರ್ವಹಿಸಿದ್ದರು. ಪ್ರತೀ ಚುನಾವಣೆಯಗಳಲ್ಲು ತಾಲೂಕಿನ ಚುನಾವಣಾ ಉಸ್ತುವಾರಿಯಾಗಿ ತನ್ನದೇ ಆದ ಶೈಲಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಚುನಾವಣೆ ಬಳಿಕ ಅವರು ನೀಡುತ್ತಿದ್ದ ಲೆಕ್ಕಾಚಾರಗಳು ಫಲಿತಾಂಶದ ವೇಳೆ ಹತ್ತಿರವಾಗುತ್ತಿತ್ತು. ಪಕ್ಷದ ದೊಡ್ಡ ದೊಡ್ಡ ನಾಯಕರ ನಿಕಟವರ್ತಿಯು ಆಗಿದ್ದ ಉಮೇಶ್ ವಾಗ್ಲೆ ಸುಳ್ಯ ಸಿಎ ಬ್ಯಾಂಕ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಮೃತರು ಸಹೋದರರಾದ ಗೋವರ್ಧನ ವಾಗ್ಲೆ, ವೆಂಕಟ್ರಮಣ ವಾಗ್ಲೆ, ನಿತ್ಯಾನಂದ ವಾಗ್ಲೆ, ಜನಾರ್ದನ ವಾಗ್ಲೆ, ಪುರುಷೋತ್ತಮ ವಾಗ್ಲೆ, ಸಹೋದರಿಯರಾದ ಸರೋಜಿನಿ , ಸುಮತಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮಧ್ಯಾಹ್ನ ನಂತರ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕಾಗಿ ಕೇರ್ಪಳ ಪುರಭವನದಲ್ಲಿ ಇರಿಸಲಾಗುವುದು. ಬಳಿಕ ಸುಳ್ಯದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯು ಸಾಗಿ ಬಂದು ಕೇರ್ಪಳ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಗುವುದು.