ಉಡುಪಿ: ಯಕ್ಷಗಾನ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ (96) ಭಾನುವಾರ ರಾತ್ರಿ ನಿಧನರಾದರು. ಮೃತರು ಇಬ್ಬರು ಪುತ್ರರು, ಇಬ್ಭರು ಪುತ್ರಿಯರನ್ನು ಅಗಲಿದ್ದಾರೆ. ಇಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕುಂದಾಪುರ ತಾಲ್ಲೂಕಿನ ಬಸ್ರೂರಿನ ಮಾರ್ಗೋಳಿಯ ಗೋವಿಂದ ಶೇರಿಗಾರರು ಬಡಗು ನಡುತಿಟ್ಟು ಯಕ್ಷಗಾನ ರಂಗ ಕಂಡ ಪಾರಂಪರಿಕ ಶೈಲಿಯ ಅಗ್ರಮಾನ್ಯ ಸ್ತ್ರೀವೇಷಧಾರಿಗಳಲ್ಲಿ ಪ್ರಮುಖರು.
1926ರಲ್ಲಿ ಜನಿಸಿದ ಗೋವಿಂದ ಶೇರಿಗಾರರು ನಾಲ್ಕನೇ ತರಗತಿವರೆಗೆ ಓದು ಪೂರೈಸಿ ಯಕ್ಷಗಾನ ರಂಗದ ಬೆಡಗಿಗೆ ಮಾರು ಹೋಗಿ ಯಕ್ಷ ರಂಗವೇರಿದವರು. ಮಂದಾರ್ತಿ ಮೇಳಕ್ಕೆ ಕೋಡಂಗಿಯಾಗಿ ಸೇರಿ ಗೆಜ್ಜೆಕಟ್ಟಿ ತಿರುಗಾಟ ಶುರುವಿಟ್ಟರು. ವೀರಭದ್ರ ನಾಯಕರಿಂದ ನಾಟ್ಯ ಹಾಗೂ ರಂಗನಡೆ ಅಭ್ಯಾಸ ಮಾಡಿ ಸೌಕೂರು ಮೇಳ ಸೇರಿ ತಿರುಗಾಟದಲ್ಲಿ ಹಂತ ಹಂತವಾಗಿ ಕೋಡಂಗಿ, ಬಾಲಗೋಪಾಲ, ಸಖಿ, ಸ್ತ್ರೀ ವೇಷಗಳನ್ನು ಮಾಡಿ ಅನುಭವ ಗಳಿಸಿದರು. ನಿರಂತರ 53 ವರ್ಷಗಳ ತಿರುಗಾಟದಲ್ಲಿ ಮಂದಾರ್ತಿ, ಮಾರಣಕಟ್ಟೆ ,ಅಮೃತೇಶ್ವರಿ, ಸೌಕೂರು, ಇಡಗುಂಜಿ ಮೇಳಗಳಲ್ಲಿ ತಿರುಗಾಟ ಮಾಡಿದ ಶೇರಿಗಾರರು 26 ವರ್ಷಗಳ ತಿರುಗಾಟವನ್ನು ಮಾರಣಕಟ್ಟೆ ಮೇಳದಲ್ಲೇ ಮಾಡಿದ್ದು ವಿಶೇಷ.