ಗದಗ: ಶ್ಯಾವಿಗೆ ಪಾಯಸದಲ್ಲಿ ಹುಳುಗಳು ಪತ್ತೆಯಾಗಿದ್ದಕ್ಕೆ ಹಾಸ್ಟೇಲ್ ವಿದ್ಯಾರ್ಥಿಗಳು ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ ಅವ್ಯವಸ್ಥೆ ಕುರಿತು ದೂರು ನೀಡಿದ ಘಟನೆ ನಡೆದಿದೆ.
ಗದಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಶುಕ್ರವಾರ ರಾತ್ರಿ ಶ್ಯಾವಿಗೆ ಪಾಯಸದಲ್ಲಿ ಹುಳುಗಳು ಸಿಕ್ಕಿವೆ. ಇನ್ನು ಕೆಲ ವಿದ್ಯಾರ್ಥಿಗಳು ಹುಳುಗಳು ಗೊತ್ತಾಗದೆ ಪಾಯಸ ಸೇವಿಸಿದ್ದಾರೆ. ಗದಗ ನಗರದ ಹೊಸ ಬಸ್ ನಿಲ್ದಾಣದ ಬಳಿ ಇರುವ ಎಸ್ಸಿ, ಎಸ್ಟಿ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ. ವಸತಿ ನಿಲಯದ ವಾರ್ಡನ್ ಬಿ ಎಸ್ ಗೂಡಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದಾರೆ. ರಾತ್ರಿ 12 ಗಂಟೆಯಾದರೂ ಊಟವಿಲ್ಲದೆ ವಿದ್ಯಾರ್ಥಿಗಳು ಪರದಾಡಿದ್ದಾರೆ. ಹಸಿವಿನಿಂದ ಬಳಲುತ್ತಿರುವ ವಿದ್ಯಾರ್ಥಿಗಳು ರಾತ್ರೋರಾತ್ರಿ ವಾರ್ಡನ್ ವಿರುದ್ಧ ಆಕ್ರೋಶಗೊಂಡಿದ್ದಾರೆ. ನಂತರ ವಸತಿ ಶಾಲೆಯ ಸಿಬ್ಬಂದಿ ಬೇರೆ ಅಡುಗೆ ಮಾಡಿಕೊಟ್ಟಿದ್ದಾರೆ. ಈ ಕುರಿತಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೂ ಮಕ್ಕಳು ದೂರು ನೀಡಿ ಸಮಸ್ಯೆಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.