ತುಮಕೂರು: ಬಡಪಾಯಿ ವಿಧವೆ ಮಹಿಳೆಯೊಬ್ಬರಿಗೆ ಗ್ರಾಮ ಪಂಚಾಯತ್ ಎರಡು ವರ್ಷಗಳಿಂದ ಕ್ಷುಲ್ಲಕ ಕಾರಣಕ್ಕೆ 2 ವರ್ಷದಿಂದ ವೇತನ ತಡೆ ಹಿಡಿದು ಸತಾಯಿಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ತುಮಕೂರು ಜಿಲ್ಲೆಯ ಶಿರಾದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಮಹಿಳೆ ವೇದಿಕೆಯಲ್ಲಿ ಬಹಿರಂಗವಾಗಿ ಶಾಸಕರ ಎದುರು ಕಣ್ಣೀರು ಹಾಕಿದರು. ತಮಗೆ ನ್ಯಾಯ ನೀಡಬೇಕೆಂದು ಅವಲತ್ತುಕೊಂಡರು.
ಜಯಲಕ್ಷ್ಮೀ ಎನ್ನುವ ಮಹಿಳೆ ತಾನು ಹುಲಿಕುಂಟೆ ಗ್ರಾಮ ಪಂಚಾಯಿತಿಯಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಎರಡು ವರ್ಷಗಳಿಂದ ವೇತನ ನೀಡಲಾಗಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಓ ರವರಿಗೆ ದೂರು ಸಲ್ಲಿಸಿದ್ದೇನೆ. ಮೊನ್ನೆಯಷ್ಟೇ ನಡೆದ ಕೆಡಿಪಿ ಸಭೆಯಲ್ಲಿ ವಿಷಯವನ್ನು ಶಾಸಕರು ಹಾಗೂ ತಹಸೀಲ್ದಾರ್ ರವರ ಗಮನಕ್ಕೂ ತಂದಿದ್ದೇನೆ. ಶಾಸಕರು 12 ಗಂಟೆಯೊಳಗಾಗಿ ವೇತನ ಸಮಸ್ಯೆ ಬಗೆಹರಿಸುವಂತೆ ತಾಲೂಕು ಪಂಚಾಯತಿ ಈಓ ರವರಿಗೆ ಸೂಚಿಸಿದರೂ, ತಮಗೆ ಈವರೆವಿಗೆ ವೇತನ ನೀಡಲಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಸ್ಥಳದಲ್ಲಿದ್ದ ಇಓ ಅವರಿಗೆ ಸೂಚನೆ ನೀಡಿದ ಶಾಸಕರು, ಸಮಸ್ಯೆ ಬಗೆಹರಿಸುವಂತೆ ಸೂಚಿಸಿ ಸಭೆಯಿಂದ ಹೊರನಡೆದರು. ಶಾಸಕರು, ತಹಸೀಲ್ದಾರ್ ಎಲ್ಲರೂ ತೆರಳಿದರೂ ವೇದಿಕೆ ಬಿಟ್ಟು ಇಳಿಯಲು ಒಪ್ಪದ ಮಹಿಳೆ, ತನಗೆ ನ್ಯಾಯ ಕೊಡಿಸಿ ಎಂದು ಕಣ್ಣೀರು ಸುರಿಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಹಿಳೆ, ತನ್ನ ವೇತನ ತಡೆ ಹಿಡಿಯಲು ಪಂಚಾಯಿತಿ ಅಧ್ಯಕ್ಷೇ ಅಕ್ಕಮ್ಮ ಹಾಗೂ ಮಗನು ಪಾಂಡುರಂಗಪ್ಪ ಕಾರಣ. ತಾನು ಕೆಲಸ ನಿರ್ವಹಿಸುತ್ತಿರುವ ಪಂಚಾಯಿತಿ ವ್ಯಾಪ್ತಿಯಿಂದ ಹೊರತಾದ ಪ್ರದೇಶದಿಂದ ಓಡಾಡುತ್ತಿದ್ದೇನೆ ಎನ್ನುವ ವಿಚಾರದಿಂದ ಹಿಡಿದು, ನನಗೆ ಮುಜುಗುರ ಆಗುವಂತೆ ಮಾತನಾಡುತ್ತಾನೆ. ಗಂಡನನ್ನು ಕಳೆದುಕೊಂಡಿರುವ ನನಗೆ ಇರುವ ಇಬ್ಬರು ಮಕ್ಕಳನ್ನು ಸಾಕಲು ವೇತನದ ಅವಶ್ಯಕತೆ ಇದೆ. ನನಗೆ ಬರಬೇಕಾಗಿರುವ ಸಂಬಳ ಕೊಡಿಸಿ ಇಲ್ಲವೇ ವಿಷವನ್ನಾದರೂ ಕೊಡಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಆಕೆಗೆ ಒಂದು ತಿಂಗಳ ವೇತನ ನೀಡಲಾಗಿದ್ದು ಉಳಿದ ಹಣವನ್ನು ಕೂಡಲೇ ನೀಡಲಾಗುವುದು ಎಂದು ಸಂಬಂಧಿತ ಅಧಿಕಾರಿಗಳು ತಿಳಿಸಿದ್ದಾರೆ.