ತಿರುವನಂತಪುರ: ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗಾನುಸಾರ ಸಂಬೋಧನೆಗೆ ಸಂಬಂಧಿಸಿದಂತೆ ತಟಸ್ಥ ಧೋರಣೆ ಅನುಸರಿಸಲು ಕೇರಳದ ಶಾಲೆಯೊಂದು ದಿಟ್ಟ ಹೆಜ್ಜೆಯನ್ನಿಟ್ಟಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ‘ಸರ್’ ಅಥವಾ ‘ಮೇಡಂ’ ಬದಲು ‘ಶಿಕ್ಷಕ’ ಎಂದು ಸಂಬೋಧಿಸುವುದನ್ನು ಕಡ್ಡಾಯಗೊಳಿಸಿದೆ.
ಕಳೆದ ಹಲವು ದಶಕಗಳಿಂದಲೂ ಭಾರತೀಯ ಶಿಕ್ಷಣ ಪದ್ದತಿಯಲ್ಲಿ ಪುರುಷ ಅಧ್ಯಾಪಕರನ್ನು ‘ಸರ್’ ಮತ್ತು ಮಹಿಳಾ ಶಿಕ್ಷಕಿಯರನ್ನು ‘ಮೇಡಂ’ ಅಥವಾ ‘ಮ್ಯಾಮ್’ ಎಂದು ಸಂಬೋಧಿಸಲಾಗುತ್ತದೆ. ಲಿಂಗ ಭೇದವಿಲ್ಲದೆ ಸಂಬೋಧನೆಗೆ ಸಂಬಂಧಿಸಿದಂತೆ ತಟಸ್ಥ ಧೋರಣೆ ಜಾರಿಗೆ ತಂದ ಕೇರಳದ ಮೊದಲ ಶಾಲೆ ಎಂಬ ಹೆಗ್ಗಳಿಕೆಗೆ ಪಾಲಕ್ಕಾಡ್ ಜಿಲ್ಲೆಯ ಒಲಶ್ಶೇರಿ ಗ್ರಾಮದ ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆ ಪಾತ್ರವಾಗಿದೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.