ಲಂಡನ್: ಕರೋನಾದ ಜೊತೆಜೊತೆಗೆ ಹೊಸ ವೈರಸ್ ನಿಯೋಕೊವ್ ಕೂಡ ಜಗತ್ತಿಗೆ ಕಂಟಕವಾಗಲಿದೆ ಎಂದು ಚೀನಾದ ವಿಜ್ಞಾನಿಗಳು ಹೇಳಿಕೊಂಡಿದ್ದರು. ಆದರೆ ಯಾರೂ ಹೆದರಬೇಕಿಲ್ಲ. ನಿಯೋಕೋವ್ ಹೊಸ ವೈರಸ್ ಅಲ್ಲ, ಯಾರೂ ಹೆದರಬೇಕಿಲ್ಲ. ಇದರಿಂದ ಮನುಷ್ಯನಿಗೆ ಸೋಂಕು ಹರಡುವ ಸಾಧ್ಯತೆಯಿಲ್ಲ ಎಂದು ತಜ್ಞರ ತಂಡ ತಿಳಿಸಿದೆ.
ನಿಯೋ ಕೊವ್ ಬಗ್ಗೆ ಕೆಲವು ತಜ್ಞರು ಅಧ್ಯಯನ ಮಾಡಿದ್ದಾರೆ. ಆ ಅಧ್ಯಯನ ಸಾರಾಂಶದ ಪ್ರಕಾರ ಇದು ಕೊರೊನಾದ ಇನ್ನೊಂದು ತಳಿ ಅಲ್ಲ. ಬದಲಿಗೆ ನಿಯೋ ಕೊವ್ ಎಂಬುದು ಮರ್ಸ್-ಕೊವ್ (MERS-CoV) ವೈರಸ್ನ ತಳಿಯಾಗಿದೆ. ಇದು ಕರೋನಾ ವೈರಸ್ ಕುಟುಂಬದ್ದೇ ಆಗಿದೆ. ಅಂದರೆ ಇದು ಹೊಸ ಕೊರೊನಾ ವೈರಸ್ ಆಗಿದ್ದು, ಮನುಷ್ಯರ ಮೇಲೆ ಪರಿಣಾಮ ಬೀರಬಹುದು. ಆದರೆ ಇದುವರೆಗೆ ಕೇವಲ ಬಾವಲಿಗಳಲ್ಲಿ ಮಾತ್ರ ಪತ್ತೆಯಾಗಿದ್ದು, ಮನುಷ್ಯರಲ್ಲಿ ಕಂಡುಬಂದಿಲ್ಲ. ಹಾಗಂತ ನಿಯೋ ಕೊವ್ ಹೊಸ ವೈರಸ್ ಅಲ್ಲ, 2010ರ ಸಮಯದಲ್ಲೇ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ದಕ್ಷಿಣ ಕೊರಿಯಾಗಳಲ್ಲಿ ಕಾಣಿಸಿಕೊಂಡಿತ್ತು. ಈ ಮರ್ಸ್ ಕೊವ್ ಪ್ರಬೇಧದ ವೈರಸ್ ತಗುಲಿದವರು ಶೇ.35ರಷ್ಟು ಮಂದಿ ಸಾಯುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಹೇಳಿದೆ. ಆದರೆ ಇನ್ನೊಂದೆಡೆ, ವೈದ್ಯಕೀಯ ತಜ್ಞ ರಾಜೇಶ್ ಜಯದೇವನ್ ಟ್ವೀಟ್ ಮಾಡಿ, ನಿಯೋ ಕೊವ್ ಖಂಡಿತ ಹೊಸ ವೈರಸ್ ಅಲ್ಲ. 2013ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಕೂಡ ಬಾವಲಿಗಳಲ್ಲಿ ಕಾಣಿಸಿಕೊಂಡಿತ್ತು. ಅದು ಮನುಷ್ಯರಿಗೆ ತಗುಲುವುದಿಲ್ಲ. ಯಾರನ್ನೂ ಕೊಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.