ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ವೇಳೆ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮೊದಲಾದ ಪ್ರಮುಖ ನಾಯಕರು ನಡೆದುಕೊಂಡು ಹೋಗುತ್ತಿರುವಾಗ ಅಡ್ಡಬಂದ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ನನ್ನು ಡಿ ಕೆ ಸುರೇಶ್ ಪಕ್ಕಕ್ಕೆ ತಳ್ಳಿದ್ದು ಭಾರೀ ಸುದ್ದಿಯಾಗಿದೆ.
ಅಷ್ಟಕ್ಕೂ ನಲಪ್ಪಾಡ್ ನನ್ನು ಯಾಕೆ ಡಿ ಕೆ ಸುರೇಶ್ ತಳ್ಳಿದರು ಅನ್ನುವುದನ್ನು ಸ್ವತಃ ನಲಪಾಡ್ ಹೇಳಿದ್ದು ಹೀಗೆ…ಪಾದಯಾತ್ರೆ ನಡಿಗೆ ವೇಳೆ ಇಂದು ತಳ್ಳಾಟ, ನೂಕಾಟ ನಡೆಯುವಾಗ ನನ್ನನ್ನು ನೋಡದೆ ಹಿಂದಿನಿಂದ ಕಾಲರ್ ಹಿಡಿದು ನನ್ನನ್ನು ಪಕ್ಕಕ್ಕೆ ತಳ್ಳಿ ನೋಡಿದರು. ಅವರು ನನ್ನನ್ನು ನೋಡದೆ ಮಾಡಿರೋದು, ಬೇಕೆಂದೇ ಉದ್ದೇಶಪೂರ್ವಕವಾಗಿ ಮಾಡಿರುವುದಲ್ಲ. ಅವರು ನನಗೆ ಹಿರಿಯ ಅಣ್ಣ ಇದ್ದಂತೆ, ಒಬ್ಬ ಅಣ್ಣ ತಮ್ಮನನ್ನು ಆ ಕಡೆ ಹೋಗು ಎಂದು ಹೇಳುವುದು ತಪ್ಪೇ, ಡಿ ಕೆ ಸುರೇಶ್ ಅವರಾಗಿರಲಿ, ಡಿ ಕೆ ಶಿವಕುಮಾರ್ ಆಗಿರಲಿ ಎಲ್ಲಾ ಕಾಂಗ್ರೆಸ್ ನ ನಾಯಕರು, ಯುವ ನಾಯಕರು, ಕಾರ್ಯಕರ್ತರು ಕುಟುಂಬದಂತೆ ಜೀವನ ಮಾಡುತ್ತಿದ್ದೇವೆ. ನನಗೆ ಅವರೆಲ್ಲರೂ ಕುಟುಂಬವಿದ್ದಂತೆ. ಆ ಸಮಯದಲ್ಲಿ ಬೇರೆ ಯಾರಾಗಿದ್ದರೂ ಅದನ್ನೇ ಮಾಡುತ್ತಿದ್ದರು. ಈ ವಿಡಿಯೊ ಪ್ರಸಾರವಾದ ಮೇಲೆ ಸಾವಿರಾರು ಮಂದಿ ನನಗೆ ಕರೆ ಮಾಡಿ ಕೇಳುತ್ತಿದ್ದಾರೆ, ಮಾಧ್ಯಮಗಳಲ್ಲಿ ಇದನ್ನು ದೊಡ್ಡ ವಿಷಯ ಮಾಡಿ ತೋರಿಸುತ್ತಿದ್ದಾರೆ. ನಾನು ಮತ್ತು ಡಿ ಕೆ ಸುರೇಶ್ ಅವರು ಈಗ ತಾನೇ ಜೊತೆಯಲ್ಲಿ ಊಟ ಮಾಡಿಕೊಂಡು ಬಂದಿದ್ದೇವೆ. ಆದರೆ ನಿರಂತರ ಫೋನ್ ಕಾಲ್ ಗಳು ಬರುತ್ತಿರುವುದರಿಂದ ನಾನು ಫೇಸ್ ಬುಕ್ ಮೂಲಕ ಸ್ಪಷ್ಟನೆ ನೀಡುತ್ತಿದ್ದೇನೆ ಎಂದರು.