ಹೊಸನಗರ: ಬೈಂದೂರು ತಾಲ್ಲೂಕಿನ ಶಿರೂರಿಗೆ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಹೊರಟಿದ್ದ ಅಲೆಮಾರಿ ಕುಟುಂಬವೊಂದು ರು.10ಕ್ಕೆ ಖರೀದಿಸಿದ್ದ ಕೋಳಿ ಮರಿಗೆ ರು. 52 ಬಸ್ ಚಾರ್ಜ್ ಕೊಟ್ಟು ತಬ್ಬಿಬ್ಬಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕೋಳಿ ಮರಿ ಖರೀದಿಸಿದ್ದ ಮೂವರು ಅಲೆಮಾರಿಗಳು ಪಟ್ಟಣದಲ್ಲಿ ಶಿರೂರು ಬಸ್ ಹತ್ತಿದ್ದರು. ಕಂಡಕ್ಟರ್ ಎಲ್ಲಿಗೆ ಎಂದು ಕೇಳಿದಾಗ, ‘ಶಿರೂರಿಗೆ ಹೋಗಬೇಕ್ರಿ, ಮೂರು ಟಿಕೆಟ್ ಕೊಡ್ರಿ’ ಅಂದರು. ಆಗ ಪುಟ್ಟ ಚೀಲದಿಂದ ‘ಚಿವ್.. ಚಿವ್…’ ಶಬ್ದ ಬಂದಿದ್ದನ್ನು ಆಲಿಸಿದ ಕಂಡಕ್ಟರ್, ಅದು ಏನು ಎಂದು ಪ್ರಶ್ನಿಸಿದರು. ಕೋಳಿ ಮರಿ ಅಂದಾಗ, ‘ಅದಕ್ಕೂ ಟಿಕೆಟ್ ತೆಗೆದುಕೊಳ್ಳಬೇಕು’ ಎಂದು ಹೇಳಿದರು. ‘ಇದು ನಮ್ಮ ಸಂಸ್ಥೆ ನಿಯಮ. ಅರ್ಧ ಚಾರ್ಜ್ ಕೊಡಿ’ ಎಂದು ರು. 52ರ ಟಿಕೆಟ್ ಕೊಟ್ಟರು. ಟಿಕೆಟ್ ಕಂಡು ಮುಖಮುಖ ನೋಡಿಕೊಂಡ ಮೂವರು ಅಲೆಮಾರಿಗಳು, ಬೇರೆ ದಾರಿ ಕಾಣದೆ ಟಿಕೆಟ್ ಗೆ ಹಣ ಪಾವತಿಸಿ ಸುಮ್ಮನಾದರು. ಇದನ್ನು ಕಂಡು ಉಳಿದ ಪ್ರಯಾಣಿಕರು, ‘ಮೂಗಿಗಿಂತ ಮೂಗುತಿ ಭಾರ ಅಂದಂಗಾಯ್ತು’ ಎಂದು ಮಾತನಾಡಿಕೊಂಡರು. ಈ ಸುದ್ದಿ ಪಟ್ಟಣದ ಎಲ್ಲೆಡೆ ಹಬ್ಬಿತ್ತು.