ಕಲಬುರಗಿ: ತಮ್ಮ ಲೇಖನಗಳ ಮೂಲಕ ಸರಕಾರವನ್ನು ಸದಾ ಎಚ್ಚರದ ಸ್ಥಿತಿಯಲ್ಲಿಟ್ಟಿರುವ ಗ್ರಾಮೀಣ ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ಹಾಗೂ ಬಸ್ ಪಾಸ್ ವಿತರಿಸುವ ಚಿಂತನೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ 36ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಎಲ್ಲ ಪತ್ರಿಕೆಗಳೂ ಹಣಕಾಸಿನ ಬಿಕ್ಕಟ್ಟಿನಿಂದಾಗಿ ಮುದ್ರಣ ನಿಲ್ಲಿಸಬಾರದು ಎಂಬ ಕಾಳಜಿ ಸರ್ಕಾರಕ್ಕಿದೆ. ಆದ್ದರಿಂದ ಸರ್ಕಾರದಿಂದ ನಿರಂತರವಾಗಿ ಜಾಹೀರಾತು ಬಿಡುಗಡೆ ಮಾಡುತ್ತಿದೆ. ಪತ್ರಕರ್ತ ಸಮುದಾಯಕ್ಕೆ ಇನ್ನೂ ಹೆಚ್ಚಿನ ಸವಲತ್ತುಗಳನ್ನು ನೀಡಲು ನಮ್ಮ ಸರಕಾರ ಬದ್ಧವಾಗಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರು ವಹಿಸಿದ ಪಾತ್ರ ಶ್ಲಾಘನೀಯ. ಅದ್ದರಿಂದ ಹಿಂದಿನ ಮುಖ್ಯಮಂತ್ರಿ, ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡುವ ಪರಿಪಾಠ ಆರಂಭಿಸಿದ್ದರು. ಅದನ್ನು ಮುಂದುವರಿಸಿದ್ದೇನೆ. ಮೃತ ಪತ್ರಕರ್ತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದವರು ನನ್ನ ಬಳಿ ಬಂದಾಗ ಒಂದು ನಿಮಿಷವೂ ಕಾಯಿಸದೇ ಅವರಿಗೆ ಪರಿಹಾರ ಮಂಜೂರು ಮಾಡಿಕೊಟ್ಟಿದ್ದೇನೆ ಎಂದರು.