ಬೆಂಗಳೂರು: ಭಾರತೀಯ ಸೇನಾ ದಿವಸದ ಅಂಗವಾಗಿ ನಡೆದ ಪರೇಡ್ ನಲ್ಲಿ ಭಾಗವಹಿಸಿದ್ದ ಯೋಧರು ಧರಿಸಿದ್ದ ಹೊಸ ಸಮವಸ್ತ್ರ ಎಲ್ಲರ ಗಮನ ಸೆಳೆದಿದೆ.
ನೂತನ ಸಮವಸ್ತ್ರ ಹೆಚ್ಚು ಆರಾಮದಾಯಕ, ಪರಿಸರ ಸ್ನೇಹಿ ಮತ್ತು ಆಕರ್ಷಕ ವಿನ್ಯಾಸ ಹೊಂದಿದೆ. ಶನಿವಾರ ನಡೆದ ಪರೇಡ್ ನಲ್ಲಿ ಪ್ಯಾರಾಚೂಟ್ ರೆಜಿಮೆಂಟ್ ನ ಯೋಧರು ಹೊಸ ಸಮವಸ್ತ್ರ ಧರಿಸಿದ್ದರು. ಯೋಧರು ಕಾರ್ಯನಿರ್ವಹಿಸುವ ತಾಣ ಮತ್ತು ಅಲ್ಲಿನ ಯಾವುದೇ ವಾತಾವರಣಕ್ಕೆ ಪೂರಕವಾಗುವಂತೆ ನೂತನ ಸಮವಸ್ತ್ರ ವಿನ್ಯಾಸ ಮಾಡಲಾಗಿದ್ದು, ಡಿಜಿಟಲ್ ಕಣ್ಗಾವಲು ವ್ಯವಸ್ಥೆಗೂ ಸುಲಭದಲ್ಲಿ ನಿಲುಕುವುದಿಲ್ಲ. ಆಲಿವ್ ಮತ್ತು ಆರ್ತ್ ನ್ ಮಿಶ್ರಣದ ಹಾಗೂ ವಿವಿಧ ರಾಷ್ಟ್ರಗಳ ಸೇನೆಯ ಯೋಧರ ಸಮವಸ್ತ್ರವನ್ನು ಅಧ್ಯಯನ ಮಾಡಿ, ರಾಷ್ಟ್ರೀಯ ಫ್ಯಾಷನ್ ಟೆಕ್ನಾಲಜಿ ಸಹಯೋಗದಲ್ಲಿ ಹೊಸ ವಿನ್ಯಾಸ ಅಭಿವೃದ್ಧಿಪಡಿಸಲಾಗಿದೆ. ಸೇನಾ ಬಳಕೆಗಾಗಿ ಮಾತ್ರ ನೂತನ ಸಮವಸ್ತ್ರ ಲಭ್ಯವಾಗಲಿದ್ದು, ಮುಕ್ತಮಾರುಕಟ್ಟೆಯಲ್ಲಿ ದೊರೆಯುವುದಿಲ್ಲ ಎಂದು ಮೂಲಗಳು ಹೇಳಿವೆ.