ಗುತ್ತಿಗಾರು: ಮೂಕ ಪ್ರಾಣಿಗಳು ತಮ್ಮ ವೇದನೆಯನ್ನು ಯಾರೊಂದಿಗೂ ಹೇಳಿಕೊಳ್ಳಲಾಗದೆ ಒದ್ದಾಡುತ್ತಿರುತ್ತವೆ. ಹೀಗೆಯೇ ಹಸುವೊಂದು ತನ್ನ ಕರುವಿಗೆ ಜನ್ಮ ನೀಡಲು ಸಾಧ್ಯವಾಗದೆ ಅರ್ಧಗಂಟೆಗೂ ಹೆಚ್ಚು ಕಾಲ ನರಳಾಡುತ್ತಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗುತ್ತಿಗಾರಿನ ಆಟೋ ಚಾಲಕ ಚಂದ್ರಶೇಖರ ಕಡೋಡಿ ನೆರವಾಗಿ ಹಸು ಮತ್ತು ಆಗಷ್ಟೇ ಜನ್ಮ ತಾಳಿದ ಮುದ್ದಾದ ಕರುವಿನ ಜೀವ ಉಳಿಸಿದ್ದಾರೆ. ಇವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಗುತ್ತಿಗಾರಿನ ವಿಶ್ವನಾಥ್ ದೇವರಗುಂಡರವರ ಹಸುವು ಕರು ಹಾಕಲು ಅರ್ಧ ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡಿತು. ಕರುವನ್ನು ಹೊರಗೆ ತೆಗೆಯಲು ಸಾಧ್ಯವಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಆಗಮಿಸಿದ ಚಂದ್ರಶೇಖರ ಕಡೋಡಿ ಕರುವನ್ನು ಎಳೆದು ತೆಗೆದರು. ಹೆಣ್ಣು ಕರು ಉಸಿರಾಟದ ಸಮಸ್ಯೆಗೆ ಸಿಲುಕೊಂಡಿತ್ತು. ತಕ್ಷಣ ಕರುವಿನ ಬಾಯಿಯ ಒಳ ಭಾಗ ಸ್ವಚ್ಛ ಗೊಳಿಸಿ ಪ್ರಥಮ ಚಿಕಿತ್ಸೆಯೊಂದಿಗೆ ಆರೈಕೆ ಮಾಡಿದ ಕೂಡಲೇ ಕರು ಉಸಿರಾಟ ಪ್ರಾರಂಭಿಸಿತು. ಹಸು ಮತ್ತು ಕರು ಈಗ ಅರೋಗ್ಯವಾಗಿವೆ .ಚಂದ್ರಶೇಖರ ಕಡೋಡಿ ಅವರು ಇಂತಹ ಸೇವೆಯನ್ನು ಹಲವಾರು ವರ್ಷಗಳಿಂದ ಮಾಡುತ್ತಿದ್ದಾರೆ. ಗೋ ಆಸ್ಪತ್ರೆಯಲ್ಲಿ ಸಹಾಯಕನಾಗಿ ಕೆಲಸ ಮಾಡಿದ್ದ ಅನುಭವ ಹೊಂದಿದ ಚಂದ್ರಶೇಖರ ಅವರು ತಾನು ಕಲಿತ ವಿದ್ಯೆಯನ್ನು ಹಲವು ವರ್ಷಗಳಿಂದ ಉಚಿತವಾಗಿ ಮಾಡಿಕೊಂಡು ಬರುತ್ತಿರುವುದು ವಿಶೇಷ.