ರಾಮನಗರ: ಸರಕಾರಿ ಕಾರ್ಯಕ್ರಮದ ವೇದಿಕೆ ರಾಜಕೀಯ ಹೈಡ್ರಾಮಾಕ್ಕೆ ಕಾರಣವಾದ ಘಟನೆ ರಾಮನಗರದಲ್ಲಿ ನಡೆದಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎದುರೇ ಸಚಿವ ಅಶ್ವಥ್ ನಾರಾಯಣ ಹಾಗೂ ಸಂಸದ ಡಿ.ಕೆ.ಸುರೇಶ್ ವಾಗ್ವಾದ ನಡೆಸಿಕೊಂಡು ಸುದ್ದಿಯಾಗಿದ್ದಾರೆ.
ಏನಿದು ಘರ್ಷಣೆ?
ಅಶ್ವಥ್ ನಾರಾಯಣ್ ಅವರ ಭಾಷಣದ ವೇಳೆ ಬಿಜೆಪಿಗೆ ಧಿಕ್ಕಾರ ಎಂದು ಸಭೆಯಿಂದ ಕೂಗಿದ್ದು, ಈ ವೇಳೆ ಆಕ್ರೋಶಿತರಾದ ಅಶ್ವಥ್ ನಾರಾಯಣ, ಯಾವನೋ ಅವನು ಗಂಡ್ಸು… ಎದ್ದು ನಿಂತು ಕೂಗು ಎಂದು ಅವಾಜ್ ಹಾಕಿದ್ದಾರೆ. ಆ ಬಳಿಕ ಅಶ್ವಥ್ ನಾರಾಯಣ ರಾಜಕೀಯ ವಿಚಾರವನ್ನು ಕೆದಕಿ ಭಾಷಣ ಮಾಡಿದ್ದು, ಈ ವೇಳೆ ಸಂಸದ ಡಿ.ಕೆ.ಸುರೇಶ್ ಆಕ್ರೋಶಗೊಂಡಿದ್ದಾರೆ.
ಅಶ್ವಥ್ ನಾರಾಯಣ ಭಾಷಣದಿಂದ ಆಕ್ರೋಶಗೊಂಡ ಡಿ.ಕೆ.ಸುರೇಶ್ ಅಶ್ವಥ್ ನಾರಾಯಣ್ ಭಾಷಣದ ನಡುವೆಯೇ ಅಶ್ವಥ್ ನಾರಾಯಣ್ ಬಳಿಗೆ ಹೋಗಿ ಏನು ಮಾತನಾಡುತ್ತಿದ್ದೀರಿ ನೀವು ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಭದ್ರತಾ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಈ ನಡುವೆ MLC ರವಿ ಅಶ್ವಥ್ ನಾರಾಯಣ್ ಬಳಿ ಇದ್ದ ಮೈಕ್ ಎಳೆದು ಘೋಷಣೆ ಕೂಗಲು ಯತ್ನಿಸಿದ್ದು, ಆದರೆ, ಅಶ್ವಥ್ ನಾರಾಯಣ್ ಮೈಕ್ ನ್ನು ಎಳೆದುಕೊಂಡರು. ಇದರಿಂದಾಗಿ ಕೆಲ ಕಾಲ ವೇದಿಕೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಆ ಬಳಿಕ ಡಿ.ಕೆ. ಸುರೇಶ್ ವೇದಿಕೆಯಲ್ಲಿಯೇ ಧರಣಿ ನಡೆಸಿದರು.
ಇಷ್ಟೆಲ್ಲ ಘಟನೆಗಳು ಸಿಎಂ ಬಸವರಾಜ್ ಬೊಮ್ಮಾಯಿ ಅವರ ಮುಂದೆಯೇ ನಡೆದಿದ್ದು, ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯವನ್ನು ತಂದು ರಾಜಕಾರಣಿಗಳ ಕಿತ್ತಾಟವನ್ನು ಸಾರ್ವಜನಿಕರು ಬಿಟ್ಟಿ ಮನರಂಜನೆ ಪಡೆದರು.