ಹಾವೇರಿ: ಸಾಲ ಕೊಡಲಿಲ್ಲ ಎಂದು ಆಕ್ರೋಶಗೊಂಡ ಗ್ರಾಹಕನೊಬ್ಬ ಕೆನರಾ ಬ್ಯಾಂಕ್ ಶಾಖೆಗೆ ನುಗ್ಗಿ ಬೆಂಕಿ ಹಚ್ಚಿದ ಘಟನೆ ಬ್ಯಾಡಗಿ ತಾಲ್ಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ.
ರಟ್ಟೀಹಳ್ಳಿ ಪಟ್ಟಣದ ವಸೀಂ ಹಜರಾತ್ ಸಾಬ್ ಮುಲ್ಲಾ (33) ಬೆಂಕಿ ಹಚ್ಚಿದ ಆರೋಪಿ. ಕೆನರಾ ಬ್ಯಾಂಕ್ ವ್ಯವಸ್ಥಾಪಕ ಲೋನ್ ಕೊಡಲು ನಿರಾಕರಿಸಿದರು ಎಂದು ಕುಪಿತಗೊಂಡ ವಸೀಂ, ಶನಿವಾರ ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ಬೈಕ್ ನಲ್ಲಿ ಪೆಟ್ರೋಲ್ ಸಮೇತ ಬ್ಯಾಂಕ್ ಬಳಿ ಬಂದಿದ್ದಾನೆ. ಗ್ರಾಮ ಪಂಚಾಯಿತಿ ಕಟ್ಟಡದ ಮೇಲಂತಸ್ತಿನಲ್ಲಿದ್ದ ಬ್ಯಾಂಕ್ ಕಟ್ಟಡದ ಹಿಂಬದಿಯ ಕಿಟಕಿ ಗಾಜು ಒಡೆದು ಒಳಗಡೆ ಹೋಗಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ ಕಟ್ಟಡದಿಂದ ಜಿಗಿದು ಹೋಗುವಾಗ, ಸದ್ದು ಕೇಳಿದ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆಯಿಂದ ಲಕ್ಷಾಂತರ ಮೌಲ್ಯದ ಪೀಠೋಪಕರಣ, ಕಂಪ್ಯೂಟರ್, ಪ್ರಿಂಟರ್, ನೋಟು ಎಣಿಸುವ ಯಂತ್ರ, ಕಾಗದ ಪತ್ರಗಳು ಸುಟ್ಟು ಹೋಗಿವೆ. ಭದ್ರತಾ ಕೊಠಡಿಯಲ್ಲಿದ್ದ ನೋಟುಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.