ಇಳಂತಿಲ: ಇಲ್ಲಿನ ತಾಲೂಕಿನ ಇಳಂತಿಲದಲ್ಲಿ ಎರಡು ತಂಡಗಳ ವೈಯಕ್ತಿಕ ದ್ವೇಷದಿಂದ ಒಂದು ತಂಡ ತಲವಾರ್ ಬೀಸಿದ್ದು ಐವರು ಆಸ್ಪತ್ರೆಗೆ ದಾಖಲಾದ ಘಟನೆ ನಿನ್ನೆ ರಾತ್ರಿ ನಡೆದಿದೆ. ತಲವಾರ್ ಹಾಗೂ ರಾಡ್ ನಿಂದ ಹಲ್ಲೆ ನಡೆಸಿರುವ ಬಗ್ಗೆ ದೂರು ನೀಡಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಏನಿದು ಘಟನೆ?
ಘಟನೆಗೆ ಸಂಬಂಧಿಸಿದಂತೆ ದೂರು ನೀಡಿರುವ ಮುಹಮ್ಮದ್ ಫಯಾಝ್ ಎಂಬವರು ತಾನು ಭಾನುವಾರ ಸಂಜೆ 7.30 ರ ವೇಳೆಗೆ ಅಂಡೆತ್ತಡ್ಕದಲ್ಲಿರುವ ಮಂಜುಶ್ರೀ ಸ್ಟೋರ್ ಗೆ ತನ್ನ ಸ್ನೇಹಿತ ಅಫೀಝ್ ಜೊತೆ ದಿನಸಿ ಖರೀದಿ ಮಾಡಲು ತೆರಳಿದ್ದು, ಅಲ್ಲಿಗೆ ಬಂದ ಜಯರಾಮ್, ಸಂದೀಪ್, ನವೀನ್, ಕಾರ್ತಿಕ್, ಸುಮಂತ್ ಶೆಟ್ಟಿ ಪ್ರೀತಮ್, ಲತೇಶ್ ನೂಜಿ ಎಂಬವರು ಕೈಯಲ್ಲಿ ರಾಡ್ ಗಳನ್ನು ಹಿಡಿದುಕೊಂಡು ಬಂದು ನಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೇ ನಾವು ತಪ್ಪಿಸಿಕೊಂಡು ಓಡಿ ಹೋಗುತ್ತಿರುವಾಗ ದ್ವಿಚಕ್ರ ವಾಹನದಲ್ಲಿ ನಮ್ಮನ್ನು ಅಟ್ಟಾಡಿಸಿಕೊಂಡು ಬಂದಿದ್ದಾರೆ. ಈ ಸಂದರ್ಭ ಆರೋಪಿ ಜಯರಾಮ ಎಂಬಾತ ನನ್ನನ್ನು ದೂಡಿ ಹಾಕಿದ್ದರಿಂದ ನನ್ನ ಎರಡೂ ಕಾಲಿನ ಮೊಣಗಂಟಿಗೆ ಹಾಗೂ ಕೈಗೆ ಗಾಯವುಂಟಾಗಿದೆ . ಅಲ್ಲದೆ, ನನ್ನ ಕಿಸೆಯಲ್ಲಿದ್ದ ಮೊಬೈಲ್ ಫೋನ್ ಜಖಂಗೊಂಡಿದ್ದು ಎಂಟು ಸಾವಿರ ರೂಪಾಯಿ ನಷ್ಟ ಉಂಟಾಗಿರುವುದಾಗಿ ದೂರು ನೀಡಿದ್ದಾರೆ.
ಇದೇ ಘಟನೆಗೆ ಸಂಬಂಧಿಸಿದಂತೆ ಇನ್ನೊಂದು ಪ್ರತ್ಯೇಕ ದೂರು ದಾಖಲಿಸಿರುವ ಅಬ್ದುಲ್ ಝಕಾರಿಯಾ ಎಂಬವರು ಭಾನುವಾರ ರಾತ್ರಿ ಸುಮಾರು 8 ಗಂಟೆಗೆ ತಾನು ಹಾಗೂ ಸಿದ್ದೀಕ್ ಅವರೊಂದಿಗೆ ಇಕ್ಬಾಲ್ ಜಿ. ಅವರ ದಿನಸಿ ಅಂಗಡಿಯ ಬಳಿ ಇದ್ದ ವೇಳೆ ಜಯರಾಮ್, ಸಂದೀಪ್, ಸುಪ್ರೀತ್, ಪ್ರೀತಮ್, ಲತೇಶ್ ಹಾಗೂ 30 ಜನರ ತಂಡ ದ್ವಿಚಕ್ರ ವಾಹನದಲ್ಲಿ ಸ್ಥಳಕ್ಕೆ ಕೈಯಲ್ಲಿ ತಲವಾರು, ರಾಡ್ ಗಳನ್ನು ಹಿಡಿದುಕೊಂಡು ಬಂದಿದ್ದು, ಇವರಲ್ಲಿ ಆರೋಪಿ ಸಂದೀಪ್ ಕುಪ್ಪೆಟ್ಟಿ ಎಂಬಾತನ ಬೈಕ್ ನಲ್ಲಿ ಸಹಸವಾರನಾಗಿದ್ದ ಜಯರಾಮ ಎಂಬಾತನನಲ್ಲಿ ಸಿದ್ದೀಕ್ ನನ್ನು ತೋರಿಸಿ ಇವನಾ? ಎಂದು ಕೇಳಿದ್ದು ಆಗ ಆತ ಇವನಲ್ಲ ಎಂದು ಹೇಳಿದಾಗ ಸಿದ್ದೀಕ್ ಗೆ ತಲವಾರಿನಿಂದ ಕೈಗೆ, ಬೆನ್ನಿಗೆ ಆರೋಪಿಗಳು ಕಡಿದಿದ್ದಾರೆ.
ಆಗ ಜೊತೆಯಲ್ಲಿದ್ದ ತಂಡದ ಇನ್ನಿತರ ಮಂದಿ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಆ ಸಂದರ್ಭ ಅವರ ತಂಡದ ಒಬ್ಬಾತ ನನ್ನನ್ನು ಹಿಡಿದುಕೊಂಡಿದ್ದು, ಜಯರಾಮನು ತನ್ನ ತಲೆಯ ಹಿಂಭಾಗಕ್ಕೆ ಕಡಿದಾಗ, ಸಂದೀಪ್ ಎಂಬಾತ ತನಗೆ ರಾಡ್ ನಿಂದ ಕೈಗೆ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಲಾಗಿದೆ. ಈ ಸಂದರ್ಭ ಅವರಿಂದ ತಪ್ಪಿಸಿಕೊಂಡು ನಾನು ಹಾಗೂ ಸಿದ್ದೀಕ್ ಓಡಿಹೋಗುತ್ತಿದ್ದಾಗ ನಮ್ಮನ್ನು ದ್ವಿಚಕ್ರ ವಾಹನಗಳಲ್ಲಿ ಹಿಂಬಾಲಿಸಿಕೊಂಡು ಬಂದಿದ್ದು, ಆಗ ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ಅಯೂಬ್ ಖಾನ್ ರ ತಲೆಯ ಭಾಗಕ್ಕೂ ಆರೋಪಿ ಜಯರಾಮ ಕಡಿದು, ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಳಿಕ ಆಸುಪಾಸಿನ ಜನರು ಸೇರುವುದನ್ನು ಕಂಡು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದಾರೆ.
ಗಾಯಗೊಂಡವರಲ್ಲಿ ಅಯೂಬ್ ಖಾನ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು,ಅಬ್ದುಲ್ ಝಕಾರಿಯಾ ಹಾಗೂ ಸಿದ್ದೀಕ್ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ದೂರಿಗೆ ಸಂಬಂಧಿಸಿದಂತೆ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.