ಮಂಗಳೂರು: ಆಕಾಶದಲ್ಲಿ ಚಿತ್ತಾರ, ನೋಡುಗರಿಗೆಲ್ಲ ಅಚ್ಚರಿ, ಸಾಲು..ಸಾಲು ಬೆಳಕಿನ ಅನುಭವ. ಬಹುಶಃ ಏಲಿಯನ್ ಇರಬಹುದೇ ಅನ್ನುವ ಅನುಮಾನ. ಡಿಸೆಂಬರ್ 20 ರಂದು ಆಕಾಶದಲ್ಲಿ ರಾತ್ರಿ ಚಮತ್ಕಾರದ ಘಟನೆ ನಡೆದಿತ್ತು. ಒಂದಲ್ಲ ಎರಡಲ್ಲ ಬರೋಬ್ಬರಿ 52 ಪುಟಾಣಿ ಉಪಗ್ರಹಗಳು ಸಾಲಾಗಿ ಕಾಣಿಸಿಕೊಂಡಿದ್ದವು. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ. ಚಿಕ್ಕಮಗಳೂರಿನಲ್ಲಿ ಒಂದು ರೀತಿಯ ಸಾಲು ಬೆಳಕಿನ ದೃಶ್ಯಗಳು ನೀಲ ಆಕಾಶದಲ್ಲಿ ಕಂಡು ಬಂದಿದ್ದವು.
ಏನಿದು ಬೆಳಕು?
ಇದು ಮಾನವ ನಿರ್ಮಿತ ಉಪಗ್ರಹ. ಅಮೆರಿಕದ ಕ್ಯಾಲಿರ್ಫೋನಿಯಾದ ಸ್ಪೇಸ್ ಎಕ್ಸ್ ಸ್ಟಾರ್ ಲಿಂಕ್ ಸಂಸ್ಥೆಯಿಂದ ಡಿಸೆಂಬರ್ 18 ನೇ ತಾರೀಖಿನಂದು ಉಪಗ್ರಹಗಳು ಉಡಾವಣೆಯಾಗಿದ್ದವು. ಬರೋಬ್ಬರಿ ೫೨ ಪುಟಾಣಿ ಉಪಗ್ರಹಗಳು ಸಾಲಾಗಿ ಉಡಾವಣೆ ಮಾಡಲಾಗಿತ್ತು. ಹಾಗೆ ಉಡಾವಣೆಯಾಗಿದ್ದ ಉಪಗ್ರಹಗಳು ಒಂದೇ ರೇಖೆಯಲ್ಲಿ ಸಾಗಿದ್ದವು. ಇದು ಅರಬ್ಬಿ ಸಮುದ್ರದ ಮೇಲೆ ಹಾದು ಹೋಗಿದ್ದರಿಂದ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ಜನರಿಗೆ ಕಾಣಿಸಿಕೊಂಡಿತ್ತು. ಇದೇ ಮೊದಲ ಬಾರಿಗೆ ಇಷ್ಟೊಂದು ಬೆಳಕಿನಿಂದ ಉಪಗ್ರಹ ದೊಡ್ಡ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದವು. ಸೂರ್ಯನ ಕಿರಣ ಸೌರ ಫಲಕದ ಮೇಲೆ ಬಿದ್ದಾಗ ಈ ರೀತಿಯ ಬೆಳಕು ಪ್ರತಿಫಲಿಸಿ ರಾತ್ರಿ ಬೆಳಕು ಕಾಣಿಸಿಕೊಂಡಿದೆ. ಭೂಮಿಯಿಂದ ಬಹಳ ಎತ್ತರಕ್ಕೆ ಈ ಉಪಗ್ರಹಗಳು ಇಲ್ಲ, ಹಾಗಾಗಿ ಹತ್ತಿರದಿಂದಲೇ ಕಂಡಿದೆ. ಇಂತಹ ಅನುಭವ ಹಿಂದೆಂದೂ ಆಗಿರಲಿಲ್ಲ. ಇದೇ ಮೊದಲ ಬಾರಿಗೆ ಕಂಡಿದ್ದರಿಂದ ಜನರಲ್ಲಿ ಹೆಚ್ಚು ಕೌತುಕ ಮೂಡಿತ್ತು.