ಸುಳ್ಯ: ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಭಾಗವಹಿಸಲು ಬೇಕಾದ ಸಂಘದ ಐ.ಡಿ. ಕಾರ್ಡ್ ಸದಸ್ಯರಲ್ಲಿಲ್ಲದಿರುವ ಕುರಿತು ನನಗೆ ದೂರುಗಳು ಬಂದಿದ್ದು, ಸದಸ್ಯರಿಗೆ ಮತದಾನ ಮಾಡಲು ಐಡಿ ಕಾರ್ಡ್ ಸಿಗುವಂತೆ ಚುನಾವಣಾಧಿಕಾರಿಗಳು ವ್ಯವಸ್ಥೆ ಮಾಡಬೇಕೆಂದು ಚುನಾವಣಾಧಿಕಾರಿಯಲ್ಲಿ ಮನವಿ ಮಾಡುವುದಾಗಿ ಒಕ್ಕಲಿಗರ ಸಂಘದ ಚುನಾವಣೆಗೆ ಅಭ್ಯರ್ಥಿಯಾಗಿ ಕಣದಲ್ಲಿರುವ ಹೇಮಾನಂದ ಹಲ್ಡಡ್ಕ ಹೇಳಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಚುನಾವಣೆಯ ಇಂದಿನ ಸ್ಥಿತಿಯನ್ನು ನೋಡುವಾಗ ಈ ಚುನಾವಣೆ ಸ್ಪರ್ಧೆಯಂತೆ ಕಾಣುತ್ತಿಲ್ಲ. ನಾನು ಫೀಲ್ಡ್ ಹೋದಲ್ಲೆಲ್ಲ ನನ್ನ ಪರವಾಗಿ ಮತ ಚಲಾಯಿಸಲು ಆಸಕ್ತಿ ಹೊಂದಿರುವವರು ಹಲವು ಮಂದಿ ಇದ್ದಾರೆ. ಆದರೆ ಅವರಲ್ಲಿ ಐಡಿ ಕಾರ್ಡ್ ಇಲ್ಲದಿರುವ ಕುರಿತು ದೂರಿಕೊಳ್ಳುತ್ತಿದ್ದಾರೆ. ಡಾ| ಕೆ.ವಿ. ಚಿದಾನಂದರು ಕಳೆದ ಬಾರಿ ಪತ್ರಿಕಾಗೋಷ್ಠಿ ಕರೆದು ಡಾ| ಕೆ.ವಿ. ರೇಣುಕಾಪ್ರಸಾದರು ಐಡಿ ಕಾರ್ಡ್ ಕಪಾಟಿನಲ್ಲಿ ಇಟ್ಟಿದ್ದಾರೆ ಎಂದು ಹೇಳಿದ್ದರು. ಇದು ನನಗೆ ಗೊತ್ತಿಲ್ಲ. ಅವರ ಮಾತಿನ ಆಧಾರದಲ್ಲಿ ನಾನು ಹೇಳುತ್ತಿರುವುದು. ಆದ್ದರಿಂದ ಚುನಾವಣಾಧಿಕಾರಿಗಳು ಸದಸ್ಯರಿಗೆ ಐಡಿ ಕೊಡುವ ವ್ಯವಸ್ಥೆ ಮಾಡಬೇಕೆಂದು ನಾವು ಕೇಳುತ್ತಿದ್ದೇವೆ. ಐ.ಡಿ. ಕಾರ್ಡ್ ಇಲ್ಲದಿದ್ದರೆ ಚುನಾವಣೆ ಅಪ್ರಸ್ತುತವಾಗುತ್ತದೆ. ಸದಸ್ಯರಲ್ಲಿ ಐಡಿ ಕಾರ್ಡ್ ಇಲ್ಲದಿರುವ ಕುರಿತು ರಾಜ್ಯ ಒಕ್ಕಲಿಗರ ಸಂಘದ ಚುನಾವಣಾಧಿಕಾರಿಗಳಿಗೆ ಅಧಿಕೃತ ಮನವಿ ಮಾಡಲಾಗುವುದು. ಸೂಕ್ತ ಪರಿಹಾರ ಆಗದೇ ಇದ್ದರೆ ಮುಂದಿನ ಕ್ರಮದ ಬಗ್ಗೆ ಯೋಚನೆ ನಡೆಸಲಾಗುವುದು ಎಂದು ಅವರು ಹೇಳಿದರು.
ಸಮುದಾಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಂತಾಗಬೇಕು. ಮತ್ತು ಪ್ರತಿಭಾವಂತರಿಗೆ ಪ್ರೋತ್ಸಾಹ ದೊರೆಯುವಂತಾಗಬೇಕು ಎಂದ ಅವರು ಸಮುದಾಯದ ಅಭಿವೃದ್ಧಿಗೆ ನಿರಂತರ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು. ಅರ್ಹತೆ ಇರುವ ಎಲ್ಲರಿಗೂ ಒಕ್ಕಲಿರ ಸಂಘದ ಸದಸ್ಯತ್ವ ನೀಡಲು ಸಂಘವು ಕ್ರಮ ಕೈಗೊಳ್ಳಬೇಕು. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಸದಸ್ಯತ್ವ ಮತ್ತು ಡಿಜಿಟಲ್ ಮಾದರಿಯಲ್ಲಿ ಗುರುತಿನ ಚೀಟಿ ದೊರೆಯುವಂತಾಗಬೇಕು ಎಂದು ಹೇಳಿದರು
ಪತ್ರಿಕಾಗೋಷ್ಠಿಯಲ್ಲಿ ರಮೇಶ್ ಸುಳ್ಯ ಉಪಸ್ಥಿತರಿದ್ದರು.