ನೆಲ್ಯಾಡಿ: ಆತ ಇನ್ನೂ ಚಿಗುರು ಮೀಸೆಯ ಹುಡುಗ. 21 ವರ್ಷದಲ್ಲಿ ಕೇವಲ 20 ನಿಮಿಷದಲ್ಲಿ ಮಹಾತ್ಮಾ ಗಾಂಧೀಜಿಯ ಚಿತ್ರವನ್ನು ಬರೆದು ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾನೆ, ಅದು ಒಂದಲ್ಲ ಎರಡಲ್ಲ ಐದು ಸಲ ವಿಶ್ವ ದಾಖಲೆ ಮಾಡಿ ಮಿಂಚಿರುವುದು ವಿಶೇಷ.
ಹೌದು, ನೆಲ್ಯಾಡಿಯ ಯುವಕ ಇಂತಹದ್ದೊಂದು ಅಪೂರ್ವ ಸಾಧನೆ ಮಾಡಿ ಈಗ ಸುದ್ದಿಯಲ್ಲಿದ್ದಾನೆ. ಸುಧಾಮಣಿ- ಶ್ರೀಧರ ಶೆಟ್ಟಿ ದಂಪತಿಯ ಪುತ್ರ ಪ್ರಸ್ತುತ ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಪರೀಕ್ಷಿತ್ ಈ ಸಾಧನೆಯ ರೂವಾರಿ. ಎ1 ಶೀಟ್ನಲ್ಲಿ ಬ್ಲೂಇಂಕ್ ಪ್ಯಾಡ್ ಸಹಾಯದೊಂದಿಗೆ ಹೆಬ್ಬೆರಳು ಮತ್ತು ತೋರು ಬೆರಳುಗಳನ್ನು ಬಳಸಿಕೊಂಡು 20 ನಿಮಿಷದಲ್ಲಿ ಗಾಂಧೀಜಿಯ ಭಾವಚಿತ್ರ ಬಿಡಿಸುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ.
ಬಾಲ್ಯದಿಂದ 9ನೇ ತರಗತಿವರೆಗೆ ನೆಲ್ಯಾಡಿಯ ಜ್ಞಾನೋದಯ ಬೆಥನಿ ಶಾಲೆಯಲ್ಲಿ ಕಲಿತು ನಂತರ 10ನೇ ತರಗತಿಯಿಂದ ಪಿಯುಸಿವರೆಗಿನ ಶಿಕ್ಷಣವನ್ನು ಮಂಗಳೂರಿನ ಗೋಪಾಡ್ಕರ್ ಅವರ ಸ್ವರೂಪ ಸಂಸ್ಥೆಯಲ್ಲಿ ಪೂರೈಸಿದ್ದರು. ಯಕ್ಷಗಾನ, ಭರತನಾಟ್ಯ, ಗಿಟಾರ್, ಕ್ರೀಯೇಟೀವ್ ಆರ್ಟ್, ವಿಶುವಲ್ ಆರ್ಟ್, ಬೀಟ್ ಬಾಕ್ಸ್ ನಲ್ಲೂ ಪರಿಣಿತರಾಗಿದ್ದಾರೆ.
ಇವರ ಸಾಧನೆಗಾಗಿ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಭವಿಷ್ಯದಲ್ಲಿ ಗಿನ್ನಿಸ್ ರೆಕಾರ್ಡ್ ಮಾಡುವ ಕುರಿತು ಯೋಜನೆಯಿದ್ದು, ಅದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ . 3.12 ಸೆಕೆಂಡುಗಳಲ್ಲಿ ಪ್ರಧಾನಿ ಮೋದಿಯವರ ಚಿತ್ರವನ್ನು ರಚಿಸಿದ್ದಕ್ಕಾಗಿ -ವರ್ಲ್ಡ್ಸ್ ಫಾಸ್ಟೆಸ್ಟ್ ಪೇಪರ್ ಕಟ್ಟಿಂಗ್ ಆರ್ಟಿಸ್ಟ್ ಎಂಬ ಪ್ರಮಾಣ ಪತ್ರ. ಈ ಸಾಧನೆಯಲ್ಲಿ ಇವರೇ ಮೊದಲಿಗರು. 5 ನಿಮಿಷಗಳಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ಫೈರ್ ಆರ್ಟ್ ಎಂಬ ಪರಿಕಲ್ಪನೆಯ ಮೂಲಕ ಜಗತ್ತಿಗೆ ಪರಿಚಿಸಿದ ಮೊದಲಿಗರಾಗಿದ್ದಾರೆ.