ಬಿಸಿ ರೋಡ್: ಮಂಗಳೂರಿನ ಮೀನುಗಾರಿಕಾ ದಕ್ಕೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಮೊಬೈಲ್ ಕಳವು ಆರೋಪ ಹೊರಿಸಿದ ದುರುಳರು ವ್ಯಕ್ತಿಯೊಬ್ಬನನ್ನು ತಲೆ ಕೆಳಗಾಗಿಸಿ ಕೈಕಾಲು ಕಟ್ಟಿ ಹಲ್ಲೆಗೈದಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ದ ಆಧಾರದ ಮೇಲೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಘಟನೆ?
ಮಂಗಳೂರಿನ ಮೀನುಗಾರಿಕಾ ದಕ್ಕೆಯಲ್ಲಿ ಆಂಧ್ರಪ್ರದೇಶ ಮೂಲದ ಕಾರ್ಮಿಕ ಕಾಲನ್ನು ಮೇಲಕ್ಕೆ ಕಟ್ಟಿ ನೇತಾಡಿಸಿದ ಘಟನೆ ಕೆಲ ದಿನಗಳ ಹಿಂದೆ ನಡೆದಿದೆ ಎನ್ನಲಾಗಿದ್ದು, ದೌರ್ಜನ್ಯಕ್ಕೊಳಗಾದ ಕಾರ್ಮಿಕನನ್ನು ವೈಲಾ ಶೀನು (34) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ತಮಿಳು ಮತ್ತು ತೆಲುಗು ಭಾಷೆ ಬಳಕೆಯಾಗಿದ್ದು, ನಿಜ ಬೊಗಳೋ ಇಲ್ಲಾಂದ್ರೆ ಕೊಂದು ಬಿಡ್ತೀವಿ ಎಂದು ಬೆದರಿಸುತ್ತಿರುವ ದೃಶ್ಯ ರೆಕಾರ್ಡ್ ಆಗಿದೆ. ತೆಲುಗು ಮೂಲದ ಕಾರ್ಮಿಕನಾಗಿರುವ ವೈಲಾ ಶೀನುವನ್ನು ಮೀನು ಕಾರ್ಮಿಕರೇ ಸೇರಿ ದೌರ್ಜನ್ಯ ನಡೆಸಿದ್ದಾರೆ. ಅಲ್ಲದೇ ಕೈಯಲ್ಲಿ ಚೈನ್ ನಲ್ಲಿ ಹಲ್ಲೆ ನಡೆಸುತ್ತಿರುವುದು ವಿಡಿಯೋ ದಲ್ಲಿ ಕಂಡು ಬರುತ್ತದೆ. ಮೊಬೈಲ್ ಕಳ್ಳತನ ಮಾಡಿದ್ದಕ್ಕೆ ಆತನನ್ನು ತಲೆ ಕೆಳಗೆ ಮಾಡಿ ನೇತು ಹಾಕಲಾಗಿದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.