ಸುಳ್ಯ : ಕುರುಂಜಿ ವೆಂಕಟ್ರಮಣ ಗೌಡರ ವ್ಯಕ್ತಿತ್ವ ಸಮಾಜಕ್ಕೆ ಮಾದರಿಯಾಗಿದೆ. ಸಾಮಾನ್ಯ ವ್ಯಕ್ತಿಯೂ ಅಸಾಮಾನ್ಯ ಶಕ್ತಿಯಾಗಲು ಸಾಧ್ಯ ಎಂದು ತನ್ನ ಬಾಳಿನ ಬೆಳಕಿನ ಮೂಲಕ ತೋರಿಸಿಕೊಟ್ಟವರು ಕುರುಂಜಿ ವೆಂಕಟ್ರಮಣ ಗೌಡರು ಎಂದು ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ವಿಶ್ರಾಂತ ನಿರ್ದೇಶಕ ಡಾ. ಕೆ.ಪಿ. ಪುತ್ತೂರಾಯ ಹೇಳಿದ್ದಾರೆ.
ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಆಧುನಿಕ ಸುಳ್ಯದ ನಿರ್ಮಾತೃ ಡಾ. ಕುರುಂಜಿ ವೆಂಕಟ್ರಮಣ ಗೌಡರ 93 ನೇ ಜಯಂತ್ಯೋತ್ಸವ ಮತ್ತು ಕೆವಿಜಿ ಸುಳ್ಯ ಹಬ್ಬದ ದಶಮಾನೋತ್ಸವ ಸಮಾರಂಭದಲ್ಲಿ ಅವರು ಉದ್ಘಾಟನೆ ನೆರವೇರಿಸಿ ಕೆ.ವಿ.ಜಿ. ಸಂಸ್ಮರಣಾ ಭಾಷಣ ಮಾಡಿದರು.
ವ್ಯಕ್ತಿ ಏನೇ ಮಾಡಿದರೂ ಸಮಾಜ ಮೆಚ್ಚದೆ ಟೀಕಿಸುತ್ತದೆ. ಆದರೆ ಕುರುಂಜಿಯಂತಹ ವ್ಯಕ್ತಿ ದೇವರು ಮೆಚ್ಚುವ ಕೆಲಸ ಮಾಡಿದವರು. ಮೌಲ್ಯಾಧಾರಿತವಾಗಿ ಬದುಕಿದವರು ಎಂದು ಡಾ. ಪುತ್ತೂರಾಯ ಹೇಳಿದರು. ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕಮಲಾಕ್ಷಿ ವಿ.ಶೆಟ್ಟಿ ಹಾಗೂ ಪ್ರಖ್ಯಾತ ಸಾಹಿತಿ ಹಾಗೂ ಅರ್ಥಶಾಸ್ತ್ರ ಲೇಖಕರಾದ ನೆಹರೂ ಸ್ಮಾರಕ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಪ್ರಭಾಕರ ಶಿಶಿಲರವರಿಗೆ ಕೆವಿಜಿ ಸಾಧನಾಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಯುವ ಸಾಧಕರಾದ ಡಾ. ಅಕ್ಷಯ ಕುದ್ಪಾಜೆ, ರಾಧಾಕೃಷ್ಣ ಇಟ್ಟಿಗುಂಡಿ, ಉಮೇಶ್ ಮಣಿಕ್ಕರ, ದಿಲೀಶ್ ಮತ್ತು ಲಿಖಿತಾ ಅವರಿಗೆ ಯುವ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಸಾಧಕರನ್ನು ಸನ್ಮಾನಿಸಿದರು.
ಸಮಿತಿಯ ಗೌರವಾಧ್ಯಕ್ಷ ಡಾ. ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಗೌರವ ಸಲಹೆಗಾರ ಡಾ. ಹರಪ್ರಸಾದ್ ತುದಿಯಡ್ಕ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಡಾ.ಕೆ.ವಿ.ರೇಣುಕಾ ಪ್ರಸಾದ್, ಕೆವಿಜಿ ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ಪಿ.ಸಿ.ಜಯರಾಮ್, ಪ್ರಧಾನ ಕಾರ್ಯದರ್ಶಿ ಚಂದ್ರಾಕ್ಷಿ ಜೆ.ರೈ, ಕೋಶಾಧಿಕಾರಿ ದಿನೇಶ್ ಮಡ್ತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಶಮಾನೋತ್ಸವದ ನೆನಪಿನಲ್ಲಿ ಸುಳ್ಯ ಸಾಂದೀಪ್ ವಿಶೇಷ ಶಾಲೆಯ ಮಕ್ಕಳ ಕಲಿಕಾ ಪ್ರೋತ್ಸಾಹಕ್ಕಾಗಿ ರೂ. 5೦೦೦೦ದ ಕೊಡುಗೆಯನ್ನು ಎಂ.ಬಿ.ಚಾರಿಟೇಬಲ್ ಟ್ರಸ್ಟ್ಗೆ ಕೊಡಲಾಯಿತು. ಸುಳ್ಯ ಹಬ್ಬ ಆಚರಣೆ ಸಮಿತಿ ಅಧ್ಯಕ್ಷ ಪಿ.ಸಿ.ಜಯರಾಮ ಸ್ಚಾಗತಿಸಿದರು. ಬೇಬಿ ವಿದ್ಯಾ ವಂದಿಸಿದರು.