ಸುಳ್ಯ: ಭಾರತ್ ಬ್ಯಾಂಕ್ ಮೂಡಬಿದಿರೆ ಶಾಖೆಯಿಂದ ಪೋರ್ಜರಿ ದಾಖಲೆಯ ಮೂಲಕ ಸಾಲ ಪಡೆದು ಬ್ಯಾಂಕ್ಗೆ ವಂಚಿಸಿದ್ದಾರೆಂಬ ದೂರಿನ ಹಿನ್ನಲೆಯಲ್ಲಿ ಮಂಗಳೂರಿನ ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಕಲ್ಮಡ್ಕ ಗ್ರಾಮದ ಬೆಟ್ಟ ಉದಯಕುಮಾರ್, ಮಹಮ್ಮದ್, ಅಶ್ರಫ್, ಬಾಳಿಲದ ಮಜೀದ್ ಮತ್ತಿತರರನ್ನು ಹಾಗೂ ಪೂರಕ ದಾಖಲೆ ಒದಗಿಸಿದ ಇಂಜಿನಿಯರ್ ರನ್ನು ಬಂಧಿಸಿರುವ ಘಟನೆ ವರದಿಯಾಗಿದೆ.
ಮಜೀದ್, ಮಹಮ್ಮದ್, ಅಶ್ರಫ್ ಮತ್ತಿತರರ ಹೆಸರಲ್ಲಿ ಹಲವು ಲಕ್ಷ ರೂ.ಗಳ ಸಾಲ ಮಾಡಿ ಅದನ್ನು ಬೆಟ್ಟ ಉದಯಕುಮಾರ್ರವರು ಪಡೆದುಕೊಂಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ಸುಮಾರು 2 ಕೋಟಿ ರೂ.ಗಳ ಸಾಲ ಆರು ಮಂದಿಯ ಹೆಸರಿನಲ್ಲಿ ಮಾಡಲಾಗಿದೆ ಎನ್ನಲಾಗಿದ್ದು, ಆರು ಪ್ರಕರಣಗಳ ಬಗ್ಗೆಯೂ ಪ್ರತ್ಯೇಕ ಪ್ರತ್ಯೇಕವಾಗಿ ಕೇಸು ದಾಖಲಾಗಿದೆ. ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಟ್ಟ ಉದಯಕುಮಾರ್ರವರು ಪುತ್ತೂರಿನಲ್ಲಿ ರಿಯಲ್ ಎಸ್ಟೇಟ್ ಉದ್ದೇಶದಿಂದ ಕೆಲವು ಎಕ್ರೆ ಭೂಮಿ ಖರೀದಿಸಿದ್ದು, ಇಲ್ಲಿ ನಿವೇಶನಗಳು ಮಾರಾಟವಾಗದ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಅದರಿಂದ ಹೊರಬರಲು ಭಾರತ್ ಬ್ಯಾಂಕ್ನಿಂದ ಸಾಲ ಮಾಡಿರುವುದಾಗಿ ಹೇಳಲಾಗುತ್ತಿದೆ.